ಕರ್ನಾಟಕದ ಕಾಶ್ಮೀರ ಕೊಡಗು ಖಾಲಿ ಖಾಲಿ- ಪ್ರವಾಸಿಗರಿಲ್ಲದೇ ಭಣಗುಡುತ್ತಿವೆ ಪ್ರವಾಸಿ ತಾಣಗಳು

Public TV
1 Min Read

ಮಡಿಕೇರಿ: ಮಹಾಮಳೆಗೆ ನಲುಗಿ ಹೋಗಿದ್ದ ಕೊಡಗು ಸಹಜ ಸ್ಥಿತಿಗೆ ಬರುತ್ತಿದೆ. ಮಳೆರಾಯ ಸದ್ಯ ರಜೆ ಪಡೆದಿದರೂ ಪ್ರವಾಸಿಗರು ಮಾತ್ರ ಕೊಡಗಿಗೆ ಕಾಲಿಡಲು ಭಯಪಡುತ್ತಿದ್ದಾರೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಅನೇಕ ಉದ್ಯಮಗಳು ನೆಲೆಕಚ್ಚಿದೆ.

ಕೊಡಗಿನ ರಣಭೀಕರ ಜಲಪ್ರವಾಹದ ಎಫೆಕ್ಟ್ ಪ್ರವಾಸೋದ್ಯಮದ ಮೇಲೂ ಬಿದ್ದಿದೆ. ಕೊಡಗಿನ ಬಹುತೇಕ ವ್ಯಾಪಾರ-ವಹಿವಾಟು ಪ್ರವಾಸಿಗರ ಮೇಲೆಯೇ ಅವಲಂಬಿತವಾಗಿದೆ. ದುರಂತದ ಬಳಿಕ ಕೊಡಗು ಜಿಲ್ಲಾಡಳಿತ ಒಂದೂವರೆ ತಿಂಗಳು ಪ್ರವಾಸಿಗರಿಗೆ ನಿಷೇಧ ಹೇರಿತ್ತು. ಸೆಪ್ಟೆಂಬರ್ 10ರ ಬಳಿಕ ನಿಷೇಧ ತೆರವು ಮಾಡಿದರೂ ಪ್ರವಾಸಿಗರ ಸಂಖ್ಯೆ ಒಂದೇ ಸಮನೆ ಇಳಿಮುಖವಾಗಿದೆ. ಹೀಗಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡು ವ್ಯಾಪಾರ ಮಾಡುತ್ತಿದ್ದ ಮಂದಿಗೆ ಬರಸಿಡಿಲು ಬಡಿದಂತಾಗಿದೆ. ಪ್ರವಾಸಿ ತಾಣ, ಹೋಟೆಲ್, ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳು ಖಾಲಿ ಖಾಲಿಯಾಗಿವೆ.

ತಲಕಾವೇರಿ, ಭಾಗಮಂಡಲಕ್ಕೆ ನಿತ್ಯ ಸಾವಿರಾರು ಮಂದಿ ಬರುತ್ತಿದ್ದರು. ಇತ್ತೀಚೆಗೆ ಪ್ರತಿನಿತ್ಯ 50 ಮಂದಿ ಪ್ರವಾಸಿಗರು ಬಂದರೆ ಹೆಚ್ಚು. ಭಾಗಮಂಡಲದ ದೇವಸ್ಥಾನದಲ್ಲಿ ಮಧ್ಯಾಹ್ನದ ವೇಳೆ ಸಾವಿರ ಮಂದಿ ಊಟ ಮಾಡುತ್ತಿದ್ದರು. ಆದರೆ ಈಗ ಯಾರೂ ಇಲ್ಲ. ವೀಕೆಂಡ್‍ನಲ್ಲಿ ರಾಜಾಸೀಟ್‍ಗೆ 5 ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದರು. ಈಗ ನೂರು, ನೂರೈವತ್ತು ಜನ ಮಾತ್ರ ಬರುತ್ತಿದ್ದಾರೆ ಎಂದು ರಾಜಾಸೀ ಸಿಬ್ಬಂದಿ ನಟರಾಜ್ ಹೇಳಿದ್ದಾರೆ.

ಕುಶಾಲನಗರದ ನಿಸರ್ಗಧಾಮ, ದುಬಾರೆ ಆನೆ ಶಿಬಿರದಲ್ಲಿ ಕಾಲಿಡಲು ಜಾಗ ಇರುತ್ತಿರಲಿಲ್ಲ. ಈಗ ಅಲ್ಲಿಯೂ ಕೂಡ ಬಿಕೋ ಎನ್ನುತ್ತಿದೆ. ಚೇಲವಾರ ಫಾಲ್ಸ್ ಹಾಗೂ ಇರ್ಪು ಜಲಪಾತ ಕೂಡ ಜನರಿಲ್ಲದೇ ಭಣಗುಡುತ್ತಿವೆ.

ಭೀಕರ ಜಲಪ್ರವಾಹಕ್ಕೆ ತುತ್ತಾಗಿದ್ದ ಕೊಡಗು ಹಂತ ಹಂತವಾಗಿ ಚೇತರಿಸಿಕೊಳ್ತಿದೆ. ಪ್ರವಾಸಿಗರು ಯಾವುದೇ ಭೀತಿ ಇಲ್ಲದೇ ಕೊಡಗಿಗೆ ಭೇಟಿ ನೀಡಬಹುದು. ಇದು ಪ್ರವಾಸಿಗರನ್ನೇ ನಂಬಿಕೊಂಡಿರುವ ಜನರ ಜೀವನ ನಿರ್ವಹಣೆಗೂ ಅನುಕೂಲವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *