ಡಿಕೆಶಿ ನಿವಾಸದಲ್ಲಿ ಬೆಳ್ಳಿ ತಟ್ಟೆ, ಕಪ್ ಗಳಲ್ಲಿ ಉಪಹಾರ ಸೇವಿಸಿದ ಕೈ ನಾಯಕರು

Public TV
2 Min Read

ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಸಮ್ಮಿಶ್ರ ಸರ್ಕಾರದ ಸಚಿವರ ಭಿನ್ನಮತ ಶಮನ ಮಾಡುವ ಉದ್ದೇಶದಿಂದ ಸಚಿವ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಉಪಹಾರ ಕೂಟದಲ್ಲಿ ಕೈ ಸಚಿವರು ಬೆಳ್ಳಿ ತಟ್ಟೆ, ಕಪ್ ಗಳಲ್ಲಿ ಆಹಾರ ಸೇವಿಸಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಸೂಚನೆ ಹಿನ್ನೆಲೆಯಲ್ಲಿ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲಾ ಸಚಿವರಿಗೂ ಬೆಳ್ಳಿ ತಟ್ಟೆ, ಕಪ್ ಗಳಲ್ಲಿ ಆಹಾರ ಪೂರೈಕೆ ಮಾಡಲಾಗಿತ್ತು. ವಿಶೇಷವಾಗಿ ಉಪಹಾರ ಕೂಟದಲ್ಲಿ ಮುಳಬಾಗಿಲು ದೋಸೆ, ಇಡ್ಲಿ, ವಡೆ, ಚೌಚೌ ಬಾತ್, ಮಸಾಲೆ ದೋಸೆ, ಸೆಟ್, ಪುರಿ, ಸಾಗು, ನೀರ್ ದೋಸೆ, ಪೊಂಗಲ್ ಪದಾರ್ಥಗಳನ್ನು ಪೂರೈಸಲಾಗಿತ್ತು. ಉಪಹಾರ ಕೂಟಕ್ಕೆ ಸಚಿವ ಡಿಕೆ ಶಿವಕುಮಾರ್ ಅವರ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸವನ್ನು ಹಬ್ಬದಂತೆ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು.

ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಪ್ರಮುಖ 15 ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಿದ್ದರು. ಆದರೆ ಸಭೆಯಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನಗೊಂಡಿರುವ ಪೌರಾಡಳಿತ ಮತ್ತು ಬಂದರು ಸಚಿವ ರಮೇಶ್ ಜಾರಕಿಹೊಳಿ ಗೈರು ಹಾಜರಿ ಆಗಿದ್ದರು. ಆದರೆ ರಮೇಶ್ ಜಾರಕಿಹೊಳಿ ಅವರು ಮುಂಬೈನಲ್ಲಿರುವ ಕಾರಣ ಆಗಮಿಸಲು ಸಾಧ್ಯವಾಗಿಲ್ಲ ಎಂಬ ಮಾತು ಕೈ ಮುಖಂಡರಿಂದ ಕೇಳಿ ಬಂದಿದೆ.

ಇಡಿ, ಐಟಿ ವಿಚಾರದಲ್ಲಿ ಡಿಕೆಶಿ ಬೆನ್ನಿಗೆ ನಿಲ್ಲಬೇಕು ಎಂದು ಹಿರಿಯ ಸಚಿವರು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆ ಟಾರ್ಗೆಟ್ ಮಾಡುವ ಕಾರ್ಯ ಹೆಚ್ಚಾಳವಾಗುತ್ತದೆ. ಈ ವೇಳೆ ಎಲ್ಲಾ ನಾಯಕರು ಅವರ ಬೆಂಬಲಕ್ಕೆ ನಿಲ್ಲುವಂತೆ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಐಟಿ ಮತ್ತು ಇಡಿ ಇಲಾಖೆ ದಾಳಿ ಕುರಿತು ಸಚಿವ ಡಿಕೆ ಶಿವಕುಮಾರ್ ಅವರು ಮನಬಿಚ್ಚಿ ಮಾತನಾಡಿದ್ದು, ಈ ವೇಳೆ ಡಿಸಿಎಂ ಪರಮೇಶ್ವರ್, ಕೆಜೆ ಜಾರ್ಜ್ ಹಾಗೂ ದೇಶಪಾಂಡೆ ಅವರು ಸಮಾಧಾನ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸಭೆ ಬಳಿಕ ಸಿದ್ದರಾಮಯ್ಯ ಅವರು ಹಾಜರಾಗದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಯಾವಾಗ ಕರೆಯಬೇಕೋ ಆಗ ಕರೆಯುತ್ತೇವೆ. ಎಲ್ಲಾ ಸಭೆಗಳಿಗೂ ಆಹ್ವಾನ ನೀಡಲು ಸಾಧ್ಯವಿಲ್ಲ. ಈ ಸಭೆ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಏರ್ಪಡಿಸಲಾಗಿದೆ. ಪಕ್ಷ ಸಂಘಟನೆಗೆ ಇಂತಹ ಚರ್ಚೆಗಳು ನಡೆಯುತ್ತದೆ. ಮುಂದಿನ ದಿನಗಳಲ್ಲಿ ದೇಶಪಾಂಡೆ ಅವರ ಮನೆಯಲ್ಲಿ ಸಭೆ ಸೇರುತ್ತೇವೆ. ಈ ಸಭೆಯಲ್ಲಿ ಪೂರ್ಣವಾಗಿ ವಿಧಾನಸಭಾ ಉಪ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಆದರೆ ಸಿದ್ದರಾಮಯ್ಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *