ಗೋಕರ್ಣ ದೇವಸ್ಥಾನ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ: ಸುಪ್ರೀಂ ಮಧ್ಯಂತರ ಆದೇಶ

Public TV
2 Min Read

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಒಪ್ಪಿಸುವಂತೆ ಸುಪ್ರೀಂಕೋರ್ಟ್ ದ್ವೀಸದಸ್ಯ ಪೀಠ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ ವಹಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ, ರಾಮಚಂದ್ರಾಪುರ ಮಠ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ.ಕುರಿಯನ್ ಜೋಸೆಫ್, ನ್ಯಾ.ಎ.ಎಂ.ಖನ್ವಿಲ್ಕರ್ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥ ಪಡಿಸಿದೆ.

ಸೆಪ್ಟೆಂಬರ್ 7ರಂದು ನಡೆದ ವಿಚಾರಣೆ ವೇಳೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಪೀಠ ನಿರಾಕರಿಸಿತ್ತು. ಸರ್ಕಾರ, ರಾಮಚಂದ್ರಾಪುರ ಮಠ ಹಾಗೂ ದೇವಸ್ಥಾನದ ಟ್ರಸ್ಟಿಗಳಿಗೆ ದೇವಸ್ಥಾನ ಪೂಜಾ ಕೈಂಕರ್ಯಗಳ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು. ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್ 17 ರಿಂದ 18ರವರೆಗೆ ಜಿಲ್ಲಾಧಿಕಾರಿ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಇದನ್ನು ಓದಿ: ಗೋಕರ್ಣ ದೇಗುಲದ ಆಡಳಿತ ನಡೆಸ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ನಿಂದ ಬ್ರೇಕ್

ಜಿಲ್ಲಾಧಿಕಾರಿ ನಡೆಯನ್ನು ಪ್ರಶ್ನಿಸಿದ್ದ ರಾಮಚಂದ್ರಾಪುರ ಮಠ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ನ್ಯಾಯಪೀಠವು, ದೇಗುಲವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ಒಪ್ಪಿಸುವ ಮೊದಲು ಇದ್ದ ಸ್ಥಿತಿ ಇರಲಿ, ನವೆಂಬರ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುವುದು. ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವುದರಿಂದ ನ್ಯಾಯಾಂಗ ನಿಂದನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ದೇವಸ್ಥಾನವನ್ನು ಸುಪರ್ದಿಗೆ ಪಡೆಯಲು ಸೆ.16ರಂದು ಜಿಲ್ಲಾಧಿಕಾರಿ ನೀಡಿದ ಆದೇಶವನ್ನು ನ್ಯಾಯಪೀಠ ರದ್ದುಪಡಿಸಿದೆ.

ಏನಿದು ಪ್ರಕರಣ?
2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಗೋಕರ್ಣದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದರ್ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ 10 ವರ್ಷಗಳಿಂದ ಗೋಕರ್ಣ ದೇಗುಲದ ಆಡಳಿತ ನಡೆಸುತ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ಬ್ರೇಕ್ ಹಾಕಿ, ಸೆಪ್ಟೆಂಬರ್ 10ರಿಂದ ಉಸ್ತುವಾರಿ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಎಂದು ಆದೇಶ ಹೊರಡಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *