ಯುವಕನ ಮೇಲೆ ಪಿಎಸ್‍ಐ ಹಲ್ಲೆ ಪ್ರಕರಣ- ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಪೊಲೀಸರಿಂದ ದೂರು

Public TV
1 Min Read

ಬಾಗಲಕೋಟೆ: ಇಳಕಲ್ ನಗರದಲ್ಲಿ ಬೈಕ್ ನಲ್ಲಿ ಟ್ರಿಪಲ್ ರೈಡ್ ವಿಚಾರಕ್ಕಾಗಿ ಯುವಕನ ಮೇಲೆ ಪಿಎಸ್‍ಐ ಹಲ್ಲೆ ಮಾಡಿದ್ದು, ಇದೀಗ ಪೊಲೀಸರು ಯುವಕನ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದ ಪಿಎಸ್‍ಐ ಎನ್ ಆರ್ ಖಿಲಾರೆ ಹಾಗೂ ಪೇದೆ ಸಿ ಆರ್ ಬಳಿಗಾರ ನಮ್ಮ ಮೇಲೆಯೇ ಹಲ್ಲೆ ನಡೆದಿದೆ ಎಂದು ಭಾನುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಷ್ಟೇ ಅಲ್ಲದೇ ಯುವಕನೇ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಏನಿದು ಪ್ರಕರಣ?:
27 ವರ್ಷದ ಶಿವರಾಜ್ ಚಿಲವೇರಿ ಟ್ರಿಪಲ್ ಬೈಕ್ ರೈಡ್ ಮಾಡಿದಕ್ಕೆ ಆತನ ಮೇಲೆ ಪಿಎಸ್‍ಐ ಎನ್‍ಆರ್ ಖಿಲಾರೆ ಹಾಗೂ ಪೇದೆ ಸಿಆರ್ ಬಳಿಗಾರ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಭಾನುವಾರ ಯುವಕ ಮತ್ತು ಆತನ ಸಂಬಂಧಿಕರು ಆರೋಪ ಮಾಡಿದ್ದರು. ಯುವಕನನ್ನು ಇಳಕಲ್ ಸರಕಾರಿ ಆಸ್ಪತ್ರೆಗೆ ಕೂಡ ದಾಖಲು ಮಾಡಲಾಗಿತ್ತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ, ಪಿಎಸ್‍ಐ ಮೇಲೆ ಕ್ರಮ ಕೈಗೊಳ್ಳಬೇಕು ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಯುವಕ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಒದರಾಡುತ್ತಿದ್ದ ಎಂದು ಶಿವರಾಜ್ ಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಶಿವರಾಜ್, ಪೊಲೀಸ್ ಠಾಣೆಗೆ ಬಂದು ಪಿಎಸ್‍ಐ ಹಾಗೂ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ದೂರು ದಾಖಲು ಮಾಡಲಾಗಿದೆ. ಈ ವಿಷಯ ಖಂಡಿಸಿ ಇಂದು ಇಳಕಲ್ ನಗರದಲ್ಲಿ ಪಿಎಸ್‍ಐ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಪ್ರಕರಣ ಸಂಪೂರ್ಣ ರಾಜಕೀಯ ತಿರುವು ಪಡೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *