ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

Public TV
2 Min Read

ಮೈಸೂರು: ಕರೆದಾಕ್ಷಣ ತಮ್ಮ ಮನೆಗೆ ಬಂದು ಚಿಕಿತ್ಸೆ ನೀಡಿಲ್ಲವೆಂದು ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಮಹದೇವ್ ಅವರು ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆಗೆ ದೂರು ನೀಡಿದ್ದಾರೆ. ಶಾಸಕರ ದೂರು ಆಧರಿಸಿ ಡಾ. ವೀಣಾಸಿಂಗ್‍ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

ಏನಿದು ಪ್ರಕರಣ?:
ಶಾಸಕ ಮಹದೇವ್ ಸೆ.18ರ ರಾತ್ರಿ 9 ಗಂಟೆಗೆ ಆಟೋ ಕಳುಹಿಸಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಾ. ವೀಣಾಸಿಂಗ್‍ರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ವೀಣಾ ಅವರು ಐಸಿಯುನಲ್ಲಿ ರೋಗಿಗಳು, ಒಳರೋಗಿಗಳು ಇದ್ದಿದ್ದರಿಂದ ಈಗ ಬರೋಕೆ ಆಗಲ್ಲ ಎಂದಿದ್ದಾರೆ. ಅಲ್ಲದೇ ಸುರಕ್ಷತೆ ದೃಷ್ಟಿಯಿಂದ ತಮ್ಮ ಮನೆಗೆ ಬರೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದರು.

ಇದರಿಂದ ಸಿಟ್ಟಿಗೆದ್ದ ಪಿರಿಯಾಪಟ್ಟಣ ಶಾಸಕ ಮಹದೇವ್, ವೈದ್ಯೆ ವೀಣಾಸಿಂಗ್ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಡಾಕ್ಟರ್ ಮೇಲೆ ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಡಾ.ವೀಣಾಸಿಂಗ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಎಂಎಲ್‍ಎ ದೂರು ಆಧರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ವೀಣಾಸಿಂಗ್‍ಗೆ ನೋಟಿಸ್ ನೀಡಿದೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಾಸಕ ಕೆ ಮಹದೇವ್, ಸೆ.18 ರಂದು ಸುಬ್ರಹ್ಮಣ್ಯ ದರ್ಶನ ಮಾಡಿಕೊಂಡು ನಾನು ಪಿರಿಯಾ ಪಟ್ಟಣಕ್ಕೆ ಸಂಜೆ 4 ಗಂಟೆಗೆ ಬಂದಿದ್ದೇನೆ. ಅಲ್ಲಿಂದ ಬಂದು ನೇರವಾಗಿ ನಾನು ತಾಲೂಕು ಪಂಚಾಯತ್ ಗೆ ತೆರಳಿದೆ. ಅಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅಲ್ಲಿಂದ ವಾಪಸ್ ಮನೆಗೆ ಬಂದೆ. ಮನೆಗೆ ಬಂದವನಿಗೆ ಸೊಸೆ ಚಪಾತಿ ಕೊಟ್ಟರು. ಅದನ್ನು ತಿ ನ್ನೋವಾಗ ನನಗೆ ತಲೆಸುತ್ತು ಬಂತು. ಹೀಗೆ ಹೋಗಿ ಮನೆಯೊಳಗೆ ಮಲಗಿದೆ ಅಂದ್ರು.

ನಮ್ಮೂರಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಹಾಗೆಯೇ ವೈದ್ಯರು ಕೂಡ ಇಲ್ಲ. ಹೀಗಾಗಿ ಯಾರಾದ್ರೂ ರಾತ್ರಿ ವೇಳೆ ಡಾಕ್ಟರ್ ಇದ್ರೆ ಕರೆಸಿ ಇಂಜೆಕ್ಷನ್ ಕೊಡಿಸು ಅಂತ ಮಗನ ಬಳಿ ಹೇಳಿದೆ. ಆ ಬಳಿಕ ನನಗೆ ಜ್ಞಾನ ತಪ್ಪಿತ್ತು. ಹೀಗಾಗಿ ಮಗ ಆಟೋದವನನ್ನು ಆಸ್ಪತ್ರೆಗೆ ಕಳಿಸಿದ್ದಾನೆ. ಆದ್ರೆ ಆ ಯಮ್ಮ ಬರಲ್ಲ ಅಂತ ನೇರವಾಗಿ ಹೇಳಿದ್ದಾಳೆ. ನಂತರ ಮಗ ಬೇರೆ ವೈದ್ಯರನ್ನು ಕರೆಸಿ ನನಗೆ ಇಂಜೆಕ್ಷನ್ ಕೊಡಿಸಿದ್ದಾರೆ.

ಮರುದಿನ ಬೆಳಗ್ಗೆ ಎದ್ದು ಆಸ್ಪತ್ರೆಗೆ ಹೊರಟೆ. ಅಲ್ಲಿ ಹೋಗಿ ವೀಣಾ ಅವರಲ್ಲಿ ಯಾಕೆ ಬರಲಿಲ್ಲ. ನೀವೆಲ್ಲ ಜನರ ಜೀವ ಉಳಿಸೋದಿಕ್ಕೆ ಇದ್ದಿರೋ ಅಥವಾ ಜೀವ ತೆಗೆಯೋದಕ್ಕೆ ಇದ್ದಿರೋ ಅಂತ ಕೇಳಿದೆ. ಆಗ ಅವರು ಸರ್, ಮನೆಗಳಿಗೆ ಟ್ರೀಟ್ ಮೆಂಟ್ ಮಾಡೋದಿಕೆ ಬರಬೇಕು ಅಂತ ಯಾವ ಕಾನೂನು ಇಲ್ಲ ಅಂದ್ರು. ಆವಾಗ ನಾನು ಒಬ್ಬ ಶಾಸಕ ಅತಿಯಾಗಿ ಸುಸ್ತಾಗಿ ಬಿದ್ದಿದ್ದರೂ ಚಿಕಿತ್ಸೆ ನೀಡಲು ಬರಲಿಲ್ಲ ಅಲ್ವಂತ ಹೇಳಿದೆ. ಆಗ ಅವರು ಆಕ್ಸಿಡೆಂಟ್ ಹಾಗೂ ಹೆರಿಗೆಗೆ ಬಂದಿದ್ದರು ಅಂತ ವೈದ್ಯೆ ತಿಳಿಸಿದ್ರು.

ಹೀಗಾಗಿ ನಾನು ಅಲ್ಲೇ ಇದ್ದ ಆಕ್ಸಿಡೆಂಟ್ ಹಾಗೂ ಹೆರಿಗೆಗೆ ಬಂದವರನ್ನು ಮಾತನಾಡಿಸಿದೆ. ಆಗ ಅವರು ಕೊಟ್ಟ ಉತ್ತರ ಕೇಳಿ ವೈದ್ಯೆಯನ್ನು ಪ್ರಶ್ನಿಸಿದೆ. ಆಗ ಅವರಿಗೆ ತಪ್ಪಾಯ್ತು ಅನ್ನೋ ಸೌಜನ್ಯ ಕೂಡ ತೋರಿಸಿಲ್ಲ ಅಂತ ಶಾಸಕರು ವಿವರಿಸಿದ್ರು.

ಶಾಸಕರ ಈ ವರ್ತನೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *