ಸಮಸ್ಯೆಗಳಿಗೆ ಸ್ಪಂದಿಸೋದು ಬಿಟ್ಟು, ದೇವಸ್ಥಾನಕ್ಕೆ ಹೋಗೋದನ್ನೆ ಸಿಎಂ ಚಟ ಮಾಡ್ಕೊಂಡಿದ್ದಾರೆ: ಆರ್.ಅಶೋಕ್

Public TV
1 Min Read

ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವುದುನ್ನು ಬಿಟ್ಟು ದೇವಸ್ಥಾನಗಳಿಗೆ ಹೋಗುವುದನ್ನೇ ಚಟವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಪದೇ ಪದೇ ನಾನು ಜನಗಳಿಂದ ಗೆದ್ದಿಲ್ಲ. ದೇವರ ದಯೆಯಿಂದ ಸಿಎಂ ಆಗಿದ್ದೀನಿ ಎಂದು ಹೇಳುತ್ತಲೇ ಇರುತ್ತಾರೆ. ಹೀಗಾಗಿ ದೇವರ ದಯೆಯಿಂದ ಸಿಎಂ ಆಗಿರುವ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಿಬೇಕಿತ್ತು. ಆದರೆ ಆದನ್ನು ಬಿಟ್ಟು ಟೆಂಪಲ್ ರನ್ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ, ಆದರೆ ಅವರು ಅದನ್ನೇ ಚಟವನ್ನಾಗಿ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇವಲ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆಯೇ ಹೊರತು, ಜನಗಳನ್ನು ಸುತ್ತುತ್ತಿಲ್ಲ. ಈಗಾಗಲೇ ಮಂಡ್ಯದಲ್ಲಿ 20 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೇ, ನಿರಂತರವಾಗಿ ರೈತರ ಸಾವಾಗುತ್ತಿದೆ. ಸರ್ಕಾರ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಕರ್ನಾಟಕದ ಜನರೂ ಸಹ ಭ್ರಮ ನಿರಸಗೊಂಡಿದ್ದಾರೆ. ಟೆಂಪಲ್ ರನ್ ಬಿಟ್ಟು, ಮೊದಲು ಜನರ ಬಳಿ ಸಿಎಂ ಕುಮಾರಸ್ವಾಮಿ ರನ್ ಮಾಡಲಿ ಎಂದು ಕಿಡಿಕಾರಿದರು.

ಇದೇ ವೇಳೆ ಕಾಂಗ್ರೆಸ್ಸಿನ ಆಂತರಿಕ ಜಗಳ, ಬೆಳಗಾವಿ ಕಿತ್ತಾಟ ಹಾಗೂ ಹೊಸಕೋಟೆ ಕಿತ್ತಾಟ ವಿಚಾರದಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿ, ಅದು ಅವರ ಆತಂರಿಕ ಕಿತ್ತಾಟ ಅಷ್ಟೇ. ನಾವು ಆಪರೇಷನ್ ಕಮಲ ಮಾಡಲ್ಲ. ಆಪರೇಷನ್ ಕಮಲದ ಬಗ್ಗೆ ನಮಗೆ ವಿಶ್ವಾಸ ಇಲ್ಲ. ಅವರೇ ಬಿದ್ದು ಹೋದರೆ, ಏನೂ ಮಾಡುವುದಕ್ಕೆ ಆಗಲ್ಲ. ಆ ಮೇಲೆ ಬೇಕಾದರೆ ಬಿಜೆಪಿ ಸರ್ಕಾರ ರಚನೆಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *