– ರಾಮಮಂದಿರ ವಿವಾದಕ್ಕೆ ಸಿಗುತ್ತಾ ಮೋಕ್ಷ..?
ನವದೆಹಲಿ: ನಿವೃತ್ತಿ ಅಂಚಿನಲ್ಲಿರುವ ಸುಪ್ರೀಂ ಮುಖ್ಯ ನ್ಯಾ.ದೀಪಕ್ ಮಿಶ್ರಾ ಸಾಲು ಸಾಲು ಮಹತ್ವದ ತೀರ್ಪುಗಳನ್ನು ನೀಡುತ್ತಿದ್ದಾರೆ. ಬುಧವಾರ ಆಧಾರ್ ಮತ್ತು ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ಕುರಿತಾದ ತೀರ್ಪು ನೀಡಿದ್ದ ಮಿಶ್ರಾ ಇಂದು ಅಯೋಧ್ಯೆಯ ಬಾಬರಿ ಮಸೀದಿ ವಿವಾದ ಸಂಬಂಧ ಮಹತ್ವದ ತೀರ್ಪು ನೀಡಲಿದ್ದಾರೆ.
ಮುಸ್ಲಿಂ ಬಾಂಧವರು ಮಸೀದಿಯಲ್ಲೇ ನಮಾಜ್ ಮಾಡಬೇಕೆ ಅಥಾವ ಎಲ್ಲಿ ಬೇಕಾದ್ರು ನಮಾಜ್ ಮಾಡಬಹುದೇ ಎಂಬುದರ ಬಗ್ಗೆ ಇಂದು ಮಹತ್ವದ ತೀರ್ಪು ನೀಡಲಿದ್ದಾರೆ. ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಾಹ್ನ ಎರಡು ಮೂವತ್ತಕ್ಕೆ ಈ ತೀರ್ಪು ನೀಡಲಿದೆ. ಮುಸ್ಲಿಂ ಸಮುದಾಯದ ಬಹುಮುಖ್ಯ ಅಂಗ ಎನಿಸಿಕೊಂಡಿರುವ ಮಸೀದಿ ಕುರಿತು ಚರ್ಚೆ ಆರಂಭವಾಗಿದ್ದು, ಈ ನಿರ್ಣಾಯಕ ತೀರ್ಪು ಭವಿಷ್ಯದ ಅಯೋಧ್ಯೆ ವಿವಾದದ ಮೇಲೆ ನೇರ ಪರಿಣಾಮ ಬೀರಲಿದೆ.
1994 ರಲ್ಲಿ ಪ್ರಾರ್ಥನೆ ಸಲ್ಲಿಸಲು ಮಸೀದಿ ಮುಖ್ಯವಲ್ಲ, ಎಲ್ಲಿ ಬೇಕಾದರೂ ಪ್ರಾಥನೆ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅಲ್ಲದೇ ಸರ್ಕಾರ ಅವಶ್ಯಕತೆ ಇದ್ದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಿದ್ದ ಜಾಗವನ್ನು ಒತ್ತುವರಿ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ತೀರ್ಪು ವಿರೊಧಿಸಿರುವ ಮುಸ್ಲಿಂ ಸಮುದಾಯಗಳು ಸುಪ್ರೀಂಕೋರ್ಟ್ ಮೆಟ್ಟುಲೇರಿದ್ದವು. ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.
ಈ ತೀರ್ಪು ನೇರವಾಗಿ ಅಯೋಧ್ಯ ಬಾಬರಿ ಮಸೀದಿ ವಿವಾದಕ್ಕೆ ನೆರವಾದ ಸಂಬಂಧ ಹೊಂದಿದೆ. 16 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಬಾಬರಿ ಮಸೀದಿಯನ್ನು ಹಿಂದೂ ಪರ ಕಾರ್ಯಕರ್ತರು ಒಡೆದು ಹಾಕಿದ್ದರು. ಮಧ್ಯ ಪ್ರವೇಶ ಮಾಡಿದ್ದ ಅಲಹಾಬಾದ್ ಹೈಕೋರ್ಟ್ ಬಾಬರಿ ಮಸೀದಿ ಆವರಣವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ, ಒಂದು ಭಾಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಪ್ರಾರ್ಥನೆಗೆ ಮಸೀದಿಯೇ ಆಗಬೇಕೆ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದು ಅಯೋಧ್ಯ ವಿವಾದಕ್ಕೆ ಇದೊಂದು ನಿರ್ಣಾಯಕ ಘಟ್ಟ ಆಗಲಿದ್ದು ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv