ಆದಾಯಕ್ಕಾಗಿ ಹೊಸ ಮದ್ಯದ ಅಂಗಡಿಯ ಮೇಲೆ ಸರ್ಕಾರದ ಕಣ್ಣು!- ಚಿಲ್ಲರೆ ಅಂಗಡಿಯೇ ಯಾಕೆ?

Public TV
2 Min Read

ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಿರುವ ರಾಜ್ಯ ಸರ್ಕಾರ, ತಮ್ಮ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು ಈಗ ಮದ್ಯದ ಅಂಗಡಿಯ ಮೇಲೆ ಕಣ್ಣು ಹಾಕಿದೆ.

ಹೌದು. ಹೊಸ ಚಿಲ್ಲರೆ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಮೂಲಕ ಖಜಾನೆ ತುಂಬಿಸಲು ಸಿದ್ಧತೆ ನಡೆಸಿದೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯದ ಅಂಗಡಿಗಳನ್ನು ಆರಂಭಿಸಲು ಪ್ಲಾನ್ ಮಾಡಿದೆ.

ಈ ಪ್ಲಾನ್ ಜಾರಿಗಾಗಿ ಪ್ರತಿ ತಾಲೂಕಿಗೆ ಎಷ್ಟು ಚಿಲ್ಲರೆ ಮದ್ಯದಂಡಿಗಳು ಬೇಕಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಪ್ರಸ್ತಾವನೆ ಸಲ್ಲಿಸುವಂತೆ ಅಬಕಾರಿ ಆಯುಕ್ತರು ಕೆಳ ಹಂತದ ಅಧಿಕಾರಿಗಳಿಗೆ ಸೆ.22ರಂದು ಪತ್ರ ಬರೆದಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆ ಸಮೀಕ್ಷೆ ಶುರು ಮಾಡಿದೆ. ಆದರೆ ಈ ಬಗ್ಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಸಿಎಂ ಕುಮಾರಸ್ವಾಮಿ, ಅಬಕಾರಿ ಇಲಾಖೆ ನನ್ನ ಬಳಿಯೇ ಇದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕೊನೆಯದಾಗಿ ಹೊಸ ಮದ್ಯದಂಗಡಿಗಳಿಗೆ 1992ರಲ್ಲಿ ಪರವನಾಗಿ ನೀಡಿದ್ದು, 1991ರ ಜನಗಣತಿ ಆಧಾರದ ಮೇಲೆ ರಾಜ್ಯದಲ್ಲಿ 3901 ಚಿಲ್ಲರೆ ಮದ್ಯದಂಗಡಿ ಇದೆ. 2011ರ ಜನಗಣತಿ ಪ್ರಕಾರ ರಾಜ್ಯಕ್ಕೆ ಇನ್ನೂ ಸುಮಾರು 1750ಕ್ಕೂ ಹೆಚ್ಚು ಮದ್ಯದಂಗಡಿ ಅಗತ್ಯವಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ ಹೊಸ ಅಬಕಾರಿ ಲೈಸೆನ್ಸ್ ನೀಡಲು ಚಿಂತನೆ ನಡೆಸಿತ್ತು. ಈ ಸಂದರ್ಭದಲ್ಲಿ ಸಮಾಜದ ನಾನಾ ವರ್ಗದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದು, ಬಿಯರ್ ಮಾರಾಟ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗುತ್ತಿದೆ.

ಚಿಲ್ಲರೆ ಅಂಗಡಿಯೇ ಯಾಕೆ?
ಅಬಕಾರಿ ವಲಯದಲ್ಲಿ ಚಿಲ್ಲರೆ ಅಂಗಡಿಗಳಿಗೆ (ಸಿಎಲ್-2) ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ಲಬ್‍ಗಳು (ಸಿಎಲ್ 4), ಸ್ಟಾರ್ ಹೋಟೆಲ್ (ಸಿಎಲ್ 6ಎ), ಹೋಟೆಲ್-ವಸತಿ ಗೃಹಗಳು (ಸಿಎಲ್ 7), ಮಿಲಿಟರಿ ಕ್ಯಾಂಟೀನ್ (ಸಿಎಲ್ 8), ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್ 9), ಎಂಎಸ್‍ಐಎಲ್ ಮಳಿಗೆಗಳು (ಸಿಎಲ್ 11ಸಿ) ಪೈಕಿ ಜನರನ್ನು ಹೆಚ್ಚು ಆಕರ್ಷಿಸುವುದು ಚಿಲ್ಲರೆ ಅಂಗಡಿ. ಈ ಕಾರಣಕ್ಕೆ ಸರ್ಕಾರ ಚಿಲ್ಲರೆ ಅಂಗಡಿಗಳನ್ನು ಹೆಚ್ಚಳ ಮಾಡಿ ಖಜಾನೆ ತುಂಬಿಸುವ ಪ್ಲಾನ್ ಮಾಡಿದೆ.

ಹೊಸ ಮದ್ಯದ ಅಂಗಡಿ ಆರಂಭಿಸಲು ಸರ್ಕಾರ ಮುಂದಾಗಿರುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *