ಸುಲ್ತಾನನ ಆರೋಗ್ಯ ವಿಚಾರಿಸಿದ್ರು ಬುಲೆಟ್ ಪ್ರಕಾಶ್!

Public TV
2 Min Read

ಮೈಸೂರು: ಹಾಸ್ಯನಟ ಹಾಗೂ ಚಲನಚಿತ್ರ ನಿರ್ಮಾಪಕ ಬುಲೆಟ್ ಪ್ರಕಾಶ್‍ರವರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಚಾಲೇಂಜಿಂಗ್ ಸ್ಟಾರ್ ದರ್ಶನ್‍ರವರ ಆರೋಗ್ಯ ವಿಚಾರಿಸಿದ್ದಾರೆ.

ಸೋಮವಾರ ನಸುಕಿನ ಜಾವ ನಡೆದ ಕಾರ್ ಅಪಘಾತದಲ್ಲಿ ದರ್ಶನ್ ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಇಡೀ ಚಿತ್ರರಂಗವೇ ದರ್ಶನ್‍ರ ಆರೋಗ್ಯ ವಿಚಾರಿಸಲು ಬರುತ್ತಿದೆ. ಮಂಗಳವಾರ ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಇಂದು ದರ್ಶನ್‍ರವರ ಪರಮಾಪ್ತರಾಗಿರುವ ಬುಲೆಟ್ ಪ್ರಕಾಶ್‍ರವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸುದೀರ್ಘ 20 ನಿಮಿಷ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್‍ರವರು ಚೆನ್ನಾಗಿದ್ದಾರೆ. ಅವರಿಗೇನೂ ಆಗಿಲ್ಲ. ಕರ್ನಾಟಕದ ಎಲ್ಲಾ ತಾಯಂದಿರ ಆಶೀರ್ವಾದ ಅವರ ಮೇಲಿದೆ. ಮಂಗಳವಾರ ನಟ ಶಿವಣ್ಣನವರು ಕೂಡ ಬಂದು, ಸುಲ್ತಾನನ ಆರೋಗ್ಯ ವಿಚಾರಿಸಿ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ನಡೆಯುತ್ತಿದೆ. ಎಲ್ಲರು ಒಟ್ಟಾಗಿ ಇದ್ದೀವಿ, ಮುಂದೆಯೂ ಇರುತ್ತೀವಿ ಎಂದು ಹೇಳಿದರು.

ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ನಸುಕಿನ ಜಾವ ಅಲ್ಲಿಂದ ಬೆಂಗಳೂರಿಗೆ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ರಿಂಗ್ ರೋಡ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಆಂಟೋನಿ ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲರಿಗೂ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ದೇವರಾಜ್ ಹಾಗೂ ಪ್ರಜ್ವಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆದ್ರೆ ಕೈ ಮೂಳೆ ಮುರಿದುಕೊಂಡಿರುವ ದರ್ಶನ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರೋ ದರ್ಶನ್, ಮೂರನೇ ದಿನವಾದ ಇಂದೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *