ಉದ್ಘರ್ಷ ಹೀರೋ ನಾನೇ ಅಂದಾಗ ಶಾಕ್ ಆಯ್ತು!: ಅನೂಪ್ ಸಿಂಗ್

Public TV
2 Min Read

ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಸುನಿಲ್ ದೇಸಾಯಿ ಅವರ ಉದ್ಘರ್ಷ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‍ವುಡ್ ನಾಯಕನಟರಾಗಿ ಎಂಟ್ರಿ ಪಡೆಯುತ್ತಿದ್ದಾರೆ ನಟ ಠಾಕೂರ್ ಅನೂಪ್ ಸಿಂಗ್. ಬೆಂಗಳೂರಿನಲ್ಲಿ ಚಿತ್ರ ತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ, ಕನ್ನಡಗಿರ ಪ್ರೀತಿ ಮತ್ತು ಆಶೀರ್ವಾದ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಮರಾಠಿ ಚಿತ್ರೋದ್ಯಮದ ಅನೂಪ್ ಕನ್ನಡಕ್ಕೆ ಹೊಸ ಮುಖವೇನು ಅಲ್ಲ. ಅನೂಪ್ ಸಿನಿ ಜರ್ನಿಯ ಹಿಂದಿನ ಕೆಲ ವಿಶೇಷ ಅಂಶಗಳನ್ನು ಅವರೇ ಹಂಚಿಕೊಂಡರು. ಹಿಂದಿ ಖಾಸಗಿ ವಾಹಿನಿಯ `ಮಹಾಭಾರತ’ ಧಾರಾವಾಹಿ ಬಳಿಕ ನನ್ನ ಜೀವನವೇ ಬದಲಾಯ್ತು. ಆ ಧಾರಾವಾಹಿಯಿಂದಲೇ ಜನರು ಇಂದು ನನ್ನನ್ನು ಗುರುತಿಸುತ್ತಾರೆ. ಧಾರಾವಾಹಿಯಲ್ಲಿಯ ಪಾತ್ರ ನನ್ನಲ್ಲಿ ಹಲವು ಬದಲಾವಣೆಗಳನ್ನು ತಂದಿದೆ ಎಂದು ಸಿನಿ ಬದುಕಿನ ಆರಂಭದ ಕುರಿತು ವಿವರಿಸಿದರು.

ಅನೂಪ್ ಎಲ್ಲರ ಗಮನ ಸೆಳೆಯುವುದು ಅವರ ಸಿಕ್ ಪ್ಯಾಕ್ ದೇಹದಿಂದ. ಸಿನಿಮಾಗಾಗಿಯೇ ದೇಹದ ಕಸರತ್ತು ಆರಂಭಿಸಿದ ಅವರು 2015 ಮಿಸ್ಟರ್ ಇಂಡಿಯಾ ಸ್ಥಾನ ಪಡೆದು ಕೊಂಡಿದ್ದಾರೆ. ಅಲ್ಲದೇ ಮಿಸ್ಟರ್ ಏಷ್ಯಾದಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದಾರೆ. ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ತಮಿಳಿನ ಸೂರ್ಯ ಮತ್ತು ತೆಲುಗು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನನಗೆ ಪ್ರೇರಣೆಯಾಗಿದ್ದು. ಮುಂದೊಂದು ದಿನ ಹೀರೋ ಆದರೆ ಇವರಂತೆ ಆಗಬೇಕು ಅಂತಾ ಅನ್ನಿಸುತ್ತಿತ್ತು. ಆದರೆ ರಾಷ್ಟ್ರ ಪ್ರಶಸ್ತಿ ಪಡೆದ ಸುನಿಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ನಟಿಸುತ್ತೇನೆ ಎಂದು ನಾನು ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಸಿನಿಮಾ ಅಫರ್ ಬಂದಿದ್ದು ಶಾಕ್: ಹೈದರಾಬಾದ್ ನಲ್ಲಿದ್ದಾಗ ಸುನಿಲ್ ಕುಮಾರ್ ಬಂದು ಚಿತ್ರದ ಕಥೆ ಹೇಳಿದ್ರು. ಅದ್ಭುತವಾದ ಸ್ಟೋರಿ ಕೇಳಿದ ಮೇಲೆ ಚಿತ್ರ ಹೀರೋ ಯಾರು ಅಂತಾ ಕೇಳಿದಾಗ ಅವರು ನೀವೇ ಅಂತಾ ಹೇಳಿದಾಗ ನನಗೆ ಶಾಕ್ ಆಗಿತ್ತು. ವಿಲನ್ ಪಾತ್ರಗಳಿಗೆ ನಾನು ಸೂಟ್ ಆಗ್ತೇನೆ ಅಂತಾ ಹೇಳುತ್ತಾರೆ. ಆದ್ರೆ ಸುನಿಲ್ ಸರ್ ನನ್ನಲ್ಲಿ ಒಬ್ಬ ಹೀರೋನನ್ನು ನೋಡಿದ್ದಾರೆ. ವಿಶೇಷ ಎಂದರೆ ಹೀರೋ ಅಂದ ಮೇಲೆ ನಾನೇನಾದರು ಲುಕ್, ಹೇರ್ ಸ್ಟೈಲ್ ಚೇಂಜ್ ಮಾಡ್ಬೇಕಾ ಅಂತಾ ಭಯದಿಂದ ಕೇಳಿದೆ. ನನ್ನ ಸಿನಿಮಾಗೆ ನಿನ್ನಂತಹ ವ್ಯಕ್ತಿಯೇ ಬೇಕೆಂದು ಹೇಳಿದರು. ಅವರಿಗೆ ನನ್ನ ಧನ್ಯವಾದ ಎಂದರು.

ಇದುವರೆಗೂ ನಾನು ಮಾಡಿದ ಪಾತ್ರಗಳಿಗಿಂತೂ ಇದು ತುಂಬಾ ವಿಭಿನ್ನವಾಗಿದೆ. ಕೊಡಗು ಜಿಲ್ಲೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಅತಿವೃಷ್ಠಿಯಿಂದಾಗಿ ಕೊಡಗಿನ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಕೊಡಗಿನಲ್ಲಿ ಕೆಲವು ಸೀನ್ ಗಳ ಮರು ಚಿತ್ರೀಕರಣ ನಡೆಯಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಚಿತ್ರತಂಡದೊಂದಿಗೆ ಶೂಟಿಂಗ್ ಮಾಡುವಾಗ ಎಲ್ಲರೂ ಸಹಾಯ ಮಾಡಿದ್ದಾರೆ. ನನ್ನ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಒದಗಿಸಿದ್ದೇನೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *