ಗುಜರಾತ್ ಶಾಸಕರ ವೇತನ 45 ಸಾವಿರ ರೂ. ಹೆಚ್ಚಳ: ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ?

Public TV
2 Min Read

ಗಾಂಧಿನಗರ: ಗುಜರಾತ್ ಶಾಸಕರ ತಿಂಗಳ ಸಂಬಳ 45 ಸಾವಿರ ರೂ. ಹೆಚ್ಚಳವಾಗಿದೆ. ಗುಜರಾತ್ ಶಾಸಕಾಂಗ ಸಭೆಯ ಸದಸ್ಯರು, ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್, ಸಚಿವರು ಮತ್ತು ವಿರೋಧ ಪಕ್ಷದ ಸದಸ್ಯರ ವೇತನ ಮತ್ತು ಭತ್ಯೆ(ತಿದ್ದುಪಡಿ) ಮಸೂದೆಗೆ ಸದನದಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ.

ಈ ಹಿಂದೆ ಗುಜರಾತ್ ಶಾಸಕರು ಪ್ರತಿ ತಿಂಗಳು 70,727 ರೂ. ವೇತನವನ್ನು ಪಡೆಯುತ್ತಿದ್ದರು. ಈಗ ಸಂಬಳ 1,16,316 ರೂ. ಆಗಲಿದೆ. 2017ರ ಡಿಸೆಂಬರ್ 22 ರಿಂದ ಪೂರ್ವಾನ್ವಯವಾಗುಂತೆ ಸಂಬಳವನ್ನು ಏರಿಕೆ ಮಾಡಲಾಗಿದೆ.

ಗುಜರಾತ್ ವಿಧಾನಸಭೆ ಒಟ್ಟು 182 ಸಂಖ್ಯಾಬಲವನ್ನು ಹೊಂದಿದ್ದು, ಬಿಜೆಪಿಯು 99 ಮತ್ತು ಓರ್ವ ಪಕ್ಷೇತರನ್ನು ಸೆಳೆದುಕೊಳ್ಳುವ ಸರ್ಕಾರ ರಚಿಸಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ 81 ಸ್ಥಾನ ಪಡೆದುಕೊಂಡಿದೆ.

ಯಾರಿಗೆ ಎಷ್ಟು?
ಮುಖ್ಯಮಂತ್ರಿ, ಸಚಿವರು, ಉಪಮುಖ್ಯಮಂತ್ರಿ, ಸಭಾಪತಿ, ಉಪ ಸಭಾಪತಿ, ವಿರೋಧ ಪಕ್ಷದ ನಾಯಕರ ಮೂಲ ವೇತನ 70,125 ರೂ. ದಿಂದ 98,500 ರೂ. ಹೆಚ್ಚಳವಾಗಿದೆ. ಈ ಹಿಂದೆ ಡಿಎ, ದೂರವಾಣಿ ವೆಚ್ಚ, ಪಿಎ ವೇತನ, ಅಂಚೆ ಮತ್ತು ಸ್ಟೇಷನರಿ ಸೇರಿದಂತೆ ಎಲ್ಲ ರೀತಿಯ ಭತ್ಯೆಗೆ 14,627 ರೂ. ಸಿಗುತಿತ್ತು. ಈಗ ಈ ಭತ್ಯೆ 37,516 ರೂ.ಗೆ ಏರಿಕೆಯಾಗಿದೆ. ಮೂಲ ವೇತನ ಮತ್ತು ಭತ್ಯೆ ಎಲ್ಲ ಸೇರಿ ಈ ಹಿಂದೆ 84,752 ರೂ. ಸಿಕ್ಕಿದರೆ ಈಗ 1,16,316 ರೂ.ಗೆ ಏರಿಕೆಯಾಗಿದೆ

ಶಾಸಕರಿಗೆ ಎಷ್ಟು?
ಮೂಲ ವೇತನ ಈ ಹಿಂದೆ 56,100 ರೂ. ಸಿಕ್ಕಿದರೆ ಈಗ ಇದು 78,800 ರೂ.ಗೆ ಏರಿಕೆಯಾಗಿದೆ. ಮೂಲ ವೇತನ ಮತ್ತು ಭತ್ಯೆ ಎಲ್ಲ ಸೇರಿ ಈ ಹಿಂದೆ 70,727 ರೂ. ಸಿಕ್ಕಿದರೆ ಈಗ 1,16,316 ರೂ. ಏರಿಕೆಯಾಗಿದೆ.

ವಿಶೇಷ ಏನೆಂದರೆ ಮಂಗಳವಾರ ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ಶಾಸಕರು ಮತ್ತು ಜಿಗ್ನೇಶ್ ಮೇವಾನಿ ವಿಧಾನಸೌಧದ ಹೊರಗಡೆ ಪ್ರತಿಭಟನೆ ನಡೆಸಿದರು. ಬುಧವಾರ ಸೈಕಲ್ ಏರಿ ವಿಧಾನಸಭೆಗೆ ಆಗಮಿಸಿದ್ದರು. ಬೆಳಗ್ಗೆ ಸದನದಲ್ಲಿ ಸರ್ಕಾರ ಮಸೂದೆ ಮಂಡಿಸುತ್ತಿದ್ದಂತೆ ಎಲ್ಲ ಶಾಸಕರು ಒಪ್ಪಿಗೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *