ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ – ಸುದೀಪ್

Public TV
3 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಆರಂಭಿಸಿರುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ (ಕೆಸಿಸಿ)ನಿಂದ ನಟ ದರ್ಶನ್ ದೂರವೇ ಉಳಿದಿದ್ದು, ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕಿಚ್ಚ ಸುದೀಪ್ ನಾವು ಯಾರಿಗೂ ಬರಬಾರದು ಎಂದು ಗೇಟ್ ಹಾಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸತತವಾಗಿ 2ನೇ ಬಾರಿಗೆ ಆಯೋಜನೆಗೊಳ್ಳುತ್ತಿರುವ ಕೆಸಿಸಿ ಟೂರ್ನಿಯ ಸುದ್ದಿಗೋಷ್ಠಿ ಇಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆಯಿತು. ನಟರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ದೊಡ್ಡಣ್ಣ ಸೇರಿದಂತೆ ಹಲವು ಸ್ಟಾರ್ ಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುದೀಪ್, ಕಳೆದ ಬಾರಿ ಕೆಸಿಸಿ ಆರಂಭಿಸಿದಾಗ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇತಿಹಾಸದಲ್ಲೇ ಇಂತಹ ಒಂದು ಪ್ರಯತ್ನ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.

ಈ ವೇಳೆ ನಟ ದರ್ಶನ್ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು. ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ. ಇದು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ ಎಂದು ತಿಳಿಸಿದರು.

ಟೂರ್ನಿಗೆ 6 ಅಂತರಾಷ್ಟ್ರೀಯ ಆಟಗಾರರು ಆಹ್ವಾನ ನೀಡಿ ಕಷ್ಟಪಟ್ಟು ಕರೆತಂದಿದ್ದೇವೆ. ಕನ್ನಡ ಚಿತ್ರರಂಗ ಇದಕ್ಕೆ ಸಾಕ್ಷಿಯಾಗಿದ್ದು, ಇಂತಹ ಒಂದು ಯೋಚನೆ ನನ್ನಿಂದ ಆರಂಭವಾದರೂ ಚಿತ್ರರಂಗದವರು ಇದನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ಇಂದು ಕೆಸಿಸಿ ದೊಡ್ಡದಾಗಿ ಬೆಳೆದಿದ್ದು, ದೊಡ್ಡ ದೊಡ್ಡ ಪ್ರಯೋಜಕರು ನಮ್ಮೊಂದಿಗಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಕೆಸಿಸಿ ಕುರಿತು ಈಗಾಗಲೇ ಅಂತರ್ಜಾಲದಲ್ಲಿ ಬಗ್ಗೆ ಮಾಹಿತಿ ಹೊರಬಿಟ್ಟಿದ್ದೇವೆ. ಇದೇ ತಿಂಗಳ 8 ಮತ್ತು 9 ರಂದು ಕೆಸಿಸಿ ಟೂರ್ನಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸುನಿಲ್ ಶೆಟ್ಟಿ, ಧನುಷ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದೇ 8 ರಂದು ಕೆಸಿಸಿ 2ನೇ ಟೂರ್ನಿ ಉದ್ಘಾಟನೆಯಾಗಲಿದೆ. ಮೊದಲ ದಿನ 4 ಪಂದ್ಯಗಳು ಹಾಗೂ 2ನೇ ದಿನ 2 ತಂಡಗಳ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

ಕೆಸಿಸಿ ಟೂರ್ನಿಯ ಪಂದ್ಯಗಳ ಟಿಕೆಟ್ ಸೋಮವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದೇ 5 ರಿಂದ ಎಲ್ಲಾ ಅಂತರಾಷ್ಟ್ರೀಯ ಆಟಗಾರರು ಆಗಮಿಸುತ್ತಿದ್ದು ಅವರೊಂದಿಗೆ ಎಲ್ಲರೂ ಅಭ್ಯಾಸ ಮಾಡಲಿದ್ದೇವೆ. ಟೂರ್ನಿಗೆ ಸಹಕಾರ ನೀಡಿದ ಎಲ್ಲಾ ಆಟಗಾರರು, ನಿರ್ಮಾಪಕರ ಸಂಘ, ನಿರ್ದೇಶಕ ಸಂಘ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞಾನರಿಗೂ ಧನ್ಯವಾದ ಎಂದರು.

ಕೊಡಗು ಸಂತ್ರಸ್ತರಿಗೆ ಸಹಾಯ: ಕೆಸಿಸಿ 2ನೇ ಆವೃತ್ತಿಯಿಂದ ಬರುವ ಲಾಭವನ್ನು ಕೊಡಗು ಸಂತ್ರಸ್ತರಿಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುದೀಪ್, ನಿರಾಶ್ರಿತರಿಗೆ ಸಹಾಯ ಮಾಡುವುದು ಖಚಿತ ಎಂದರು. ಆದರೆ ಎಷ್ಟು ಹಣ ಕೊಡುತ್ತಾರೆ ಎಂಬುವುದನ್ನು ಸ್ಪಷ್ಟಪಡಿಸಲಿಲ್ಲ.

ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನನಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ನಾನು ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ನೆಚ್ಚಿನ ಕ್ರಿಕೆಟರ್ ಜಿ. ಆರ್ ವಿಶ್ವನಾಥ್. ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ. ಚೆನ್ನೈನಲ್ಲಿ ಇದ್ದಾಗಲೂ ಬೆಂಗಳೂರು, ಮುಂಬೈಗೆ ಬಂದು ಕ್ರಿಕೆಟ್ ನೋಡುತ್ತಿದ್ದೆ. ಕಳೆದ ಬಾರಿ ಎರಡು ದಿನ ಅಭ್ಯಾಸ ಮಾಡಿ ಟೂರ್ನಿಯಲ್ಲಿ ಭಾಗವಹಿದ್ದೆ. ಆದರೆ ಈ ಬಾರಿ ಹೆಚ್ಚಿನ ಅಭ್ಯಾಸ ನಡೆಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಟೂರ್ನಿಯ ರೂವರಿ ಸುದೀಪ್ ಗೆ ಜೊತೆ ನಾವೆಲ್ಲರೂ ಇದ್ದೇವೆ, ಅವರು ಎಲ್ಲೆ ಕರೆದರೂ ಒಗ್ಗಟ್ಟಾಗಿ ಹೋಗಿ ಆಡುತ್ತೇವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *