ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ – 1.14 ಕೋಟಿ ಹಣ ಸಂಗ್ರಹ

Public TV
1 Min Read

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 1 ಕೋಟಿ 14 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ ಗಾಯತ್ರಿ ಮತ್ತು ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಸಮ್ಮುಖದಲ್ಲಿ ನೂರಾರು ಸಿಬ್ಬಂದಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಎಣಿಸುವ ಕಾರ್ಯವನ್ನು ನಡೆಸಿದ್ದರು.

ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಆಗಸ್ಟ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ 1 ಕೋಟಿ 14 ಲಕ್ಷ ರೂಪಾಯಿ ನಗದು ಹಣ ಸಿಕ್ಕಿದೆ. ಹಣ ಮಾತ್ರವಲ್ಲದೇ 31 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿವೆ. ಇದೇ ತಿಂಗಳಿನಲ್ಲಿ ಶ್ರಾವಣ ಇದ್ದ ಕಾರಣ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿದ್ದರು. ಆದ್ದರಿಂದ ದೊಡ್ಡ ಮೊತ್ತದ ಹಣವು ಹುಂಡಿಯಲ್ಲಿ ಸಂಗ್ರಹವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಭೆ ವೇಳೆ ಅಧಿಕಾರಿಯೊಬ್ಬರು ಮಹದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *