ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

Public TV
3 Min Read

ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಯಶ್‍ವಂತ ಸಿನ್ಹಾ ಅವರು ರಫೇಲ್ ಒಪ್ಪಂದ, ಮೇಕ್ ಇನ್ ಇಂಡಿಯಾ ವಿಚಾರವನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೋದಿ ವಿರೋಧಿ ಅಲ್ಲ. 2014ರಲ್ಲಿ ಸಕ್ರಿಯ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಉದ್ಯೋಗ ಇಲ್ಲದವರು ಮೋದಿ ಅವರನ್ನು ಟೀಕೆ ಮಾಡುವುದನ್ನು ಉದ್ಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಅಮಿತ್ ಶಾ ವ್ಯಂಗ್ಯವಾಡಿದ್ದರು. ಹೀಗಾಗಿ ನನ್ನ ಧ್ವನಿ ಜೋರಾಯಿತು ಎಂದು ತಿಳಿಸಿದರು.

ರಫೇಲ್ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದವನ್ನು ರದ್ದು ಮಾಡಿದ್ದು ಯಾಕೆ? ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ರದ್ದಾಗಿದ್ದು ಏಕೆ? ಕ್ಯಾಬಿನೆಟ್ ಗಮನಕ್ಕೂ ತಂದು ಈ ಡೀಲ್ ನಡೆದಿಲ್ಲ ಯಾಕೆ ಎಂದು ಸಿನ್ಹಾ ಪ್ರಶ್ನಿಸಿದರು.

ಮೇಕ್ ಇನ್ ಇಂಡಿಯಾ ಅಂತಾ ಹೇಳುವವರು ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಯಾಕೆ? ಆ ಕಂಪೆನಿ ವಿರುದ್ಧ ನಾನು ಮಾತನಾಡಲಾರೆ ಯಾಕೆಂದರೆ 500 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲು ಮಾಡಬಹುದು. ರಫೇಲ್ ಒಪ್ಪಂದದಿಂದಾಗಿ ಎಚ್‍ಎಎಲ್ ಕಂಪೆನಿಗೆ ತುಂಬಾ ನಷ್ಟವಾಗಿದೆ. ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪೆನಿಗೆ ಅಹ್ವಾನ ಕೊಟ್ಟಿದ್ದು ಯಾಕೆ? ಈ ಆರೋಪದಲ್ಲಿ ಪ್ರಧಾನಿ ಮೋದಿ ಒಬ್ಬರೇ ಭಾಗಿಯಾಗಿದ್ದಾರೆ. ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವೆ ಈ ಡೀಲ್ ನಡೆದಿದೆ ಅಂತಾ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಈ ಎಲ್ಲ ಕಾರಣಗಳಿಗಾಗಿ ಪಿಎಂ ಮೋದಿ ವೈಯುಕ್ತಿಕವಾಗಿ ಇದಕ್ಕೆ ಜವಾಬ್ದಾರಿ ಆಗುತ್ತಾರೆ ಎಂದು ದೂರಿದರು.

ಈ ವ್ಯವಹಾರ ಹೇಗೆ ನಡೆದಿದೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕು. 20 ದಿನಗಳ ಹಿಂದೆ ನೋಂದಣಿ ಆದ ಕಂಪೆನಿಗೆ ಕೊಟ್ಟಿದ್ದು ಹೇಗೆ? ಆ ಕಂಪೆನಿಗೆ ಯುದ್ದ ವಿಮಾನ ತಯಾರಿಕೆಯ ಅನುಭವವೇ ಇಲ್ಲ. ಇಂತಹ ಕಂಪನಿಗೆ ಡೀಲ್ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

ಜಂಟೀ ಸಂಸದೀಯ ಸಮಿತಿಯಲ್ಲಿ ಇದರ ರಫೇಲ್ ಡೀಲ್ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಆಡಳಿತ ಪಕ್ಷದವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲ ಆಗುವುದಿಲ್ಲ. ಆದರೆ ಫಲಿತಾಂಶ ಏನು ಬರುತ್ತೆ ಎನ್ನುವುದನ್ನು ತಿಳಿದುಕೊಳ್ಳಬಹುದು. ನಾನು ಕೂಡ 2ಜಿ ಹಗರಣದ ಸಮಿತಿಯಲ್ಲಿ ಇದ್ದು, ಏನಾಯಿತು ಎನುವುದನ್ನು ತಿಳಿದಿಕೊಂಡೆ ಎಂದರು.

ದೇಶವನ್ನು ಅಭಿವೃದ್ಧಿ ಮಾದರಿಯಲ್ಲಿ ನಡೆಸಿದರೆ ತನ್ನಷ್ಟಕ್ಕೆ ತಾನೇ ಮೇಕ್ ಇನ್ ಇಂಡಿಯಾ ಆಗುತ್ತದೆ. ಅದನ್ನು ಬಿಟ್ಟು ಭಾಷಣದಿಂದ ಮೇಕ್ ಇನ್ ಇಂಡಿಯಾ ಆಗಲ್ಲ ಎಂದು ಪ್ರಧಾನಿಗೆ ಟಾಂಗ್ ಕೊಟ್ಟ ಅವರು, ಪ್ರಜಾತಂತ್ರದ ಮೇಲೆ, ಪ್ರಜಾತಂತ್ರದ ಸಂಸ್ಥೆಗಳ ಮೇಲೆ ದಾಳಿ ಆದ ಕಾರಣ ನಾನು ಬಿಜೆಪಿ ತೊರೆದೆ. ನಾನು 2 ವರ್ಷ ವಿದೇಶಾಂಗ ಸಚಿವನಾಗಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ನನಗೆ ಸಂಪೂರ್ಣ ಸ್ವತಂತ್ರ ನೀಡಿದ್ದರು. ಆದರೆ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷದಲ್ಲಿ ಯಾವತ್ತಾದರೂ ವಿದೇಶಾಂಗ ಸಚಿವೆಯನ್ನು ವಿದೇಶಕ್ಕೆ ಕರೆದೊಯ್ದೊದ್ದಿರಾ? ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಹಾಗೂ ಖಾತೆಯ ಹೆಸರಿಗೆ ಸೀಮಿತ ಎಂದು ಕಾಲೆಳೆದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಒಂದೇ ಕಡೆ ಇವೆ. ಹಿಂದೆಂದೂ ಪ್ರಜಾಪ್ರಭುತ್ವದ ಅಂಗಗಳು ಇಷ್ಟು ದುರ್ಬಲವಾಗಿರುವುದನ್ನು ನಾನು ಕಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಯಶ್‍ವಂತ್ ಸಿನ್ಹಾ ವಾಗ್ದಾಳಿ ನಡೆಸಿದರು.

ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು. ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಈ ವರ್ಷದ ಏಪ್ರಿಲ್ ನಲ್ಲಿ ಬಿಜೆಪಿಯನ್ನು ಯಶ್‍ವಂತ್ ಸಿನ್ಹಾ ತೊರೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *