ರಾಯರ ಉತ್ತರಾರಾಧನೆ -ಪೂಜೆಯಲ್ಲಿ ಪಾಲ್ಗೊಂಡ ಹೆಚ್‍ಡಿಡಿ, ಜಗ್ಗೇಶ್

Public TV
1 Min Read

– ಪ್ರಸಾದ ಬಡಿಸಿದ ಹಿರಿಯ ನಟ ಶಿವರಾಮ್

ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸಾರ್ವಭೌಮರ 347 ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ನಾನಾ ಭಾಗದಿಂದ ಭಕ್ತರು ಮಂತ್ರಾಲಯಕ್ಕೆ ಬಂದು ದರ್ಶನ ಪಡೆದಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ನಟ ಜಗ್ಗೇಶ್ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಿ ಆರಾಧನಾ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಜೊತೆಗೆ ಹಿರಿಯ ಚಿತ್ರನಟ ಶಿವರಾಂ ಮಠದಲ್ಲೇ ಉಳಿದು ಭಕ್ತರಿಗೆ ಊಟ ಬಡಿಸುವ ಮೂಲಕ ರಾಯರ ಸೇವೆಯಲ್ಲಿ ತೊಡಗಿದ್ದರು. ರಾಜಕೀಯವಾಗಿ ಎಲ್ಲವನ್ನು ಅನುಭವಿಸಿರುವ ನನಗೆ ಆರೋಗ್ಯವನ್ನ ಕೊಡು ಅಂತ ಬೇಡಿಕೊಳ್ಳುತ್ತೇನೆ ಅಂತ ದೇವೇಗೌಡ ಹೇಳಿದರು.

ಶ್ರಾವಣ ಬಹುಳ ದ್ವಿತಿಯ ಪುಣ್ಯ ದಿನವನ್ನ ಆಯ್ಕೆ ಮಾಡಿಕೊಂಡು ಗುರು ರಾಯರು ವೃಂದಾವನಸ್ಥರಾಗಿ 347 ವರ್ಷಗಳು ಸಂದಿವೆ. ಈ ದಿನವನ್ನೇ ಮಧ್ಯಾರಾಧನೆಯಾಗಿ ಮಂತ್ರಾಲಯದಲ್ಲಿ ಆಚರಿಸಲಾಗುತ್ತಿದೆ. ಮಂಗಳವಾರ ವಿಶೇಷವಾಗಿ ವೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನಡೆಯಿತು. ಪ್ರತಿವರ್ಷದಂತೆ ತಿರುಮಲ ತಿರುಪತಿ ದೇವಾಲಯದಿಂದ ರಾಯರಿಗೆ ಪವಿತ್ರ ವಸ್ತ್ರವನ್ನ ಕಳುಹಿಸಲಾಗಿದೆ. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಿತು. ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಯನ್ನ ಅದ್ಧೂರಿಯಾಗಿ ಮಾಡಲಾಯಿತು ಎಂದು ಮಠ ವ್ಯವಸ್ಥಾಪಕ ಶ್ರೀನಿವಾಸ್ ರಾವ್ ಹೇಳಿದ್ದಾರೆ.

ರಾಯರ 347 ನೇ ಆರಾಧನ ಮಹೋತ್ಸವ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯುತ್ತಿದೆ. ಸಪ್ತರಾತ್ರೋತ್ಸವದ ಅಂಗವಾಗಿ ಏಳು ದಿನ ಕಾಲ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಯರ ಆರಾಧನ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದ್ದು,  ಕಲಾಮಂಟಪದಲ್ಲಿ ನಡೆದ ಗಾಯಕಿ ಚೈತ್ರ ಗಾನಸುಧೆಗೆ ಭಕ್ತರು ತಲೆದೂಗಿದರು.

ಇಂದು ಉತ್ತರರಾಧನೆ ನಡೆಯುತ್ತಿದ್ದು, ಮಠದ ಅಂಗಳದಲ್ಲಿ ಮಹಾರಥೋತ್ಸವ ನಡೆಯಲಿದೆ. ಆರಾಧನ ಮಹೋತ್ಸವ ಅಂತಿಮ ಘಟ್ಟಕ್ಕೆ ಬಂದಿದ್ದು, ಉತ್ತರಾಧನೆ ಮೂಲಕ ಸಂಭ್ರಮಕ್ಕೆ ತೆರೆಬೀಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *