ಗ್ರಾಮದಲ್ಲಿ ತಿಂಗಳಿಗೊಂದು ಸಾವು – ಇರೋ ಕುಟುಂಬಗಳಲ್ಲಿ ಸಾವಿಲ್ಲದ ಮನೆಯೇ ಇಲ್ಲ

Public TV
2 Min Read

– ಇಡೀ ಊರಲ್ಲೀಗ ನರಪಿಳ್ಳೆಯೂ ಸಿಗಲ್ಲ

ರಾಯಚೂರು: ಸಾವಿಲ್ಲದ ಮನೆಯಿಲ್ಲ ಅನ್ನೋದು ಸರ್ವ ಸತ್ಯವಾದ ಮಾತು ನಿಜ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೊಗಡಿಗೋಟ ತಾಂಡದಲ್ಲಿ ತಿಂಗಳಿಗೆ ಒಬ್ಬರು ಸಾಯದ ಮನೆಯಿಲ್ಲ ಅನ್ನೋ ಮಾತು ಪ್ರತಿ ತಿಂಗಳು ಸತ್ಯವಾಗಿದೆ. ಅಚ್ಚರಿಯಾದ್ರೂ ನೀವೂ ನಂಬಲೇಬೇಕು ಇಲ್ಲಿನ ಪ್ರತಿ ಮನೆಯಲ್ಲಿ ತಿಂಗಳಿಗೊಬ್ಬರು ಸಾಯುತ್ತಾರೆ. ಅದರಲ್ಲೂ ಯುವಕರ ಸಾವೇ ಹೆಚ್ಚು. ಸಾವಿಗೆ ಹೆದರಿದ ಗ್ರಾಮಸ್ಥರು ಮನೆ ಖಾಲಿ ಮಾಡಿ ಗ್ರಾಮವನ್ನೇ ತೊರೆಯುತ್ತಿದ್ದಾರೆ.

30 ಮನೆಗಳಿರುವ ಈ ಗ್ರಾಮದ ಪ್ರತಿ ಮನೆಯಲ್ಲಿ ಕಳೆದ ಎರಡು ವರ್ಷದಲ್ಲಿ ಕನಿಷ್ಠ ಐದಾರು ಜನ ಸಾವನ್ನಪ್ಪಿದ್ದಾರೆ. ಇಡೀ ಗ್ರಾಮದಲ್ಲಿ ಕಳೆದ ಒಂದೂವರೆ ಎರಡು ವರ್ಷದಲ್ಲಿ ವಿವಿಧ ಕಾರಣಗಳಿಂದ 70 ಕ್ಕೂ ಹೆಚ್ಚು ಜನ ಮರಣಹೊಂದಿದ್ದಾರೆ. ದೈವದ ಕಾಟವೂ, ದೆವ್ವದ ಕಾಟವೂ ತಿಳಿಯದೇ ಗುರುಗಳೊಬ್ಬರ ಮಾತಿನಂತೆ ಮೂರು ತಿಂಗಳ ಕೆಳಗೆ ಒಂದೇ ದಿನದಲ್ಲಿ ಇಡೀ ಗ್ರಾಮವನ್ನೇ ಖಾಲಿ ಮಾಡಿ ಬೆಟ್ಟದ ಮೇಲೆ ಟಿನ್ ಶಡ್‍ಗಳನ್ನ ಹಾಕಿಕೊಂಡು ಬದುಕುತ್ತಿದ್ದಾರೆ. ಮೂರು ತಿಂಗಳಿಂದ ಯಾವುದೇ ಸಾವು ಆಗಿಲ್ಲ. ಇದನ್ನು ನೋಡಿದ್ರೆ ನಮ್ಮೂರಿಗೆ ಶಾಪ ಇದೆ ಅನ್ನೋದು ಗೊತ್ತಾಗುತ್ತೆ ಎಂದು ಗ್ರಾಮಸ್ಥೆ ಮಂಕಮ್ಮ ಹೇಳುತ್ತಾರೆ.

ನಿರಂತರ ಸಾವುಗಳ ಕಾರಣ ಗ್ರಾಮದ ಜನಸಂಖ್ಯೆ 300 ಇದ್ದದ್ದು ಈಗ 200 ಕ್ಕೆ ಬಂದಿದೆ. ಅನಕ್ಷರಸ್ಥರಾದ್ರೂ ವ್ಯವಸಾಯ ಹಾಗೂ ಕೂಲಿ ಕೆಲಸ ಮಾಡುವ ಗ್ರಾಮಸ್ಥರು ಮನೆಗಳನ್ನ ಚೆನ್ನಾಗಿಯೇ ಕಟ್ಟಿಕೊಂಡು ಬದುಕುತ್ತಿದ್ದರು. ಸರ್ಕಾರಿ ಸೌಲಭ್ಯಗಳು ಸಹ ಪುಟ್ಟ ಗ್ರಾಮಕ್ಕೆ ತಲುಪಿದ್ದು ರಸ್ತೆ, ನೀರು, ಶೌಚಾಲಯದ ವ್ಯವಸ್ಥೆಯೂ ಇತ್ತು. ಆದರೆ ನಿಗೂಢ ಸಾವುಗಳು ಮಾತ್ರ ಇದುವರೆಗೂ ಅರ್ಥವಾಗಿಲ್ಲ. ವಯಸ್ಸಿಗೆ ಬಂದ ಮಕ್ಕಳನ್ನ ಕಳೆದುಕೊಂಡು ವೃದ್ಧರೂ ಗೋಳಿಡುತ್ತಿದ್ದಾರೆ.

ವಿಚಿತ್ರವೊ ,ವಿಸ್ಮಯವೊ, ಕಾಕತಾಳೀಯವೊ ಅಥವಾ ವೈಜ್ಞಾನಿಕ ಕಾರಣವೇನಾದರೂ ಇದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬೊಗಡಿಗೋಟ ಗ್ರಾಮವನ್ನ ಬಿಟ್ಟು ಬೆಟ್ಟದ ಮೇಲೆ ಬಂದು ವಾಸಿಸುತ್ತಿರುವ ಜನ ಈಗ ಆರಾಮಾಗಿದ್ದಾರೆ. ಸುಮಾರು 70 ಜನರ ಸರಣಿ ಸಾವಾದರೂ ಇದೂವರೆಗೆ ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದು ನಿಜಕ್ಕೂ ದುರದೃಷ್ಠಕರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *