ಕಲಬುರಗಿ ಜನತೆಯ ದಶಕದ ಕನಸು ನನಸು: ಲ್ಯಾಂಡ್ ಆಯ್ತು 2 ವಿಮಾನಗಳು

Public TV
2 Min Read

ಕಲಬುರಗಿ: ಮೋಡದ ಮರೆಯಿಂದ ಮೊಟ್ಟ ಮೊದಲ ಬಾರಿಗೆ ಲ್ಯಾಂಡ್ ಆಗುತ್ತಿರುವ ವಿಮಾನ. ಆ ವಿಮಾನ ಕಂಡು ಸಂತೋಷದಿಂದ ಜೈಕಾರ ಹಾಕುತ್ತಿರುವ ಜನಗಳು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ಹೊರವಲಯದ ಶ್ರೀನಿವಾಸ ಸರಡಗಿಯ ವಿಮಾನ ನಿಲ್ದಾಣದಲ್ಲಿ.

ಒಂದರಲ್ಲ ಎರಡಲ್ಲ ಭರ್ತಿ ಹತ್ತು ವರ್ಷ ಚಾತಕ ಪಕ್ಷಿಯಂತೆ ಕಲಬುರಗಿ ಜನ ಲೋಹದ ಹಕ್ಕಿಯ ಆಗಮನದ ನಿರೀಕ್ಷೆಯಲ್ಲಿದ್ದು, ಇಂದು ಆ ಭಾಗದ ದಶಕದ ಕನಸಾದ ಲೋಹದ ಹಕ್ಕಿಯ ಹಾರಾಟದ ಕನಸು ನನಸಾಗಿದೆ.

ದಶಕಗಳಿಂದ ನಿರ್ಮಾಣವಾಗುತ್ತಿದ್ದ ವಿಮಾನ ನಿಲ್ದಾಣದ ರನ್‍ವೇ ನಾಲ್ಕು ತಿಂಗಳ ಹಿಂದೆ ಸಂಪೂರ್ಣ ಮುಗಿದಿತ್ತು. ಹೀಗಾಗಿ ಪ್ರಾಯೋಗಿಕ ವಿಮಾನ ಹಾರಿಸುತ್ತೇವೆ ಎಂದು ಹೇಳಿಕೊಂಡು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾ ಬಂದಿದ್ದರೂ ಒಂದಲ್ಲ ಒಂದು ಕಾರಣದಿಂದ ರದ್ದಾಗುತಿತ್ತು. ಅಂತಿಮವಾಗಿ ಇಂದು ಬೆಳಗ್ಗೆ ಹೈದರಾಬಾದ್ ನಿಂದ ಡೈಮಂಡ್ 40 ಮತ್ತು ಡೈಮಂಡ್ 42 ಹೆಸರಿನ ವಿಮಾನಗಳು ಯಶಸ್ವಿಯಾಗಿ ಲ್ಯಾಂಡ್ ಆಯ್ತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಖುದ್ದು ಹಾಜರಿದ್ದೂ ಲೋಹದ ಹಕ್ಕಿಗಳ ಪ್ರಯೋಗಿಕ ಹಾರಾಟವನ್ನು ಕಣ್ತುಂಬಿಕೊಂಡಿರು.

ಹೈದರಾಬಾದ್ ಮೂಲದ ಏಷಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಡೈಮಂಡ್ 40 ವಿಮಾನವನ್ನ ಮಹಿಳಾ ಪೈಲಟ್ ಹೊತ್ತು ತಂದು ಲ್ಯಾಂಡ್ ಮಾಡಿದ್ದು ನೆರೆದಿದ್ದ ಜನರಿಗೆ ಮತ್ತಷ್ಟು ಖುಷಿ ಆಯ್ತು. ಇದರ ಬೆನ್ನಲ್ಲೇ ಮತ್ತೊಂದು ವಿಮಾನ ಕೂಡ ಬಂದಿಳಿಯಿತು. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಪ್ರತಿಕ್ರಿಯಿಸಿ, ಉಳಿದ ಕೆಲಸಗಳು ನಡೆಯುವಂತೆ ಶೀಘ್ರ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ ಎಂದು ತಿಳಿಸಿದರು.

10 ವರ್ಷ ಆಗಿದ್ದು ಯಾಕೆ?
ಬಿಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಲಬುರಗಿ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದರು. 2010ರಲ್ಲಿ ಸರ್ಕಾರ ರಾಹಿ ಕಂಪೆನಿಗೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ಈ ಕಂಪೆನಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಸರ್ಕಾರ ಟೆಂಡರ್ ರದ್ದುಗೊಳಿಸಿ ಬೇರೊಂದು ಕಂಪೆನಿಗೆ ನೀಡಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಹಿ ಕಂಪೆನಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ಕೆಲಸ ಅರ್ಧಕ್ಕೆ ನಿಂತಿತ್ತು. 2015ರಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದ ಬಳಿಕ ಲೋಕೋಪಯೋಗಿ ಇಲಾಖೆ ರನ್‍ವೇ ನಿರ್ಮಾಣ ಮಾಡಲು ಆರಂಭಿಸಿತ್ತು. ಸಂಸದ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಈ ನಿಲ್ದಾಣ ಪೂರ್ಣಗೊಳ್ಳಲು ವಿಶೇಷ ಮುತುವರ್ಜಿ ವಹಿಸಿದ್ದರು.

ರಾಜ್ಯ ಸರ್ಕಾರ ಇಲ್ಲಿ ಪೈಲಟ್ ಗಳಿಗೆ ತರಬೇತಿ ನೀಡಲು ಮುಂದಾಗಿದ್ದು, ಈ ಸಂಬಂಧ ಎರಡು ಕಂಪೆನಿಗಳು ತರಬೇತಿ ಕೇಂದ್ರವನ್ನು ಸ್ಥಾಪಿಸಲು ಆಸಕ್ತಿ ವಹಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *