ಉಡುಪಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಸಾಮೂಹಿಕ ನಮಾಜ್, ಕೊಡಗಿಗೆ ದಾನ

Public TV
1 Min Read

ಉಡುಪಿ: ಜಿಲ್ಲೆಯಲ್ಲಿ ಸೌಹಾರ್ದತೆಯ ಅರ್ಥ ಪೂರ್ಣ ಬಕ್ರೀದ್ ಆಚರಣೆ ಮಾಡಲಾಗಿದ್ದು, ಈ ಬಾರಿ ನೂರಾರು ಮುಸ್ಲಿ ಬಾಂಧವರು ಕೊಡಗು ಹಾಗೂ ಕೇರಳ ಸಂತ್ರಸ್ತರಿಗಾಗಿ ನಗರದ ಇಂದ್ರಾಣಿ ನೂರಾನಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ತ್ಯಾಗ ಮತ್ತು ಬಲಿದಾನದ ಹೆಸರಾಗಿರುವ ಬಕ್ರೀದ್ ಹಬ್ಬವನ್ನು ನಗರದಲ್ಲಿ ಆಚರಿಸಲಾಗಿದ್ದು, ಈ ವೇಳೆ ನೂರಾರು ಮುಸ್ಲಿಂ ಬಾಂಧವರು ನೆರೆ ಪೀಡಿತ ಕೊಡಗು ಮತ್ತು ಕೇರಳ ರಾಜ್ಯದಲ್ಲಿನ ಸಂತ್ರಸ್ತರಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಅಲ್ಲದೇ ಈ ವೇಳೆ ಸ್ಥಳದಲ್ಲಿ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಕಾರ್ಯವನ್ನು ಮಾಡಿದರು.

ಪಾರ್ಥನೆಯ ವೇಳೆ ಧರ್ಮಗುರುಗಳು ಜಲಪ್ರಳಯದ ಕುರಿತು ಪ್ರಸ್ತಾಪಿಸಿ ಪ್ರವಚನ ನೀಡಿದರು. ಈ ವೇಳೆ ಎಲ್ಲಾ ಮುಸ್ಲಿಂ ಬಾಂಧವರಿಗೆ ಕೊಡಗು ಹಾಗೂ ಕೇರಳದ ಅಣ್ಣ-ತಮ್ಮಂದಿರು ಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ನಿಜವಾದ ಮಾನವ ಧರ್ಮ, ನಾವೆಲ್ಲರೂ ಅವರಿಗಾಗಿ ಸಹಾಯ ಮಾಡೋಣ ಎಂದು ತಿಳಿಸಿದ್ದಾರೆ.

ಪ್ರಾರ್ಥನೆಯ ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಸೀದಿ ಧರ್ಮಗುರುಗಳಾದ ಮಸೀಯುಲ್ಲಾ ಖಾನ್ ರವರು ಮಾತನಾಡಿ, ಬಕ್ರೀದ್ ಹಬ್ಬವನ್ನು ಮುಸ್ಲಿಮರು ಹೆಚ್ಚು ಸಂತೋಷದಿಂದ ಆಚರಿಸುತ್ತೇವೆ, ಅಲ್ಲದೇ ಈ ಹಬ್ಬಕ್ಕೆ ಸ್ವಲ್ಪ ಹೆಚ್ಚು ಹಣವನ್ನೇ ಖರ್ಚು ಮಾಡುತ್ತಾರೆ. ಆದರೆ ಈ ಬಾರಿ ಸಂಭ್ರಮಕ್ಕೆಂದು ಖರ್ಚು ಮಾಡುವ ಒಂದು ಅಂಶವನ್ನು ಪರಿಹಾರ ರೂಪದಲ್ಲಿ ಕೊಡಲು ಕರೆ ನೀಡಲಾಗಿದೆ ಎಂದು ಹೇಳಿದರು.

ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಾಗಿದ್ದೇವೆ. ಕೊಡಗು ಜನರಿಗೆ ಈಗಾಗಲೇ ಮಸೀದಿಯಲ್ಲಿ ದುಡ್ಡು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೇರಳ ಜನರಿಗೆ ಸಹಾಯಮಾಡಲು ಮುಂದಾಗಿದ್ದೇವೆ. ನಮ್ಮ ಹಬ್ಬದ ಖುಷಿಯನ್ನು ದಾನ-ಧರ್ಮದ ಮೂಲಕ ಆಚರಿಸಿದರೆ, ಅದು ಅಲ್ಲಾನಿಗೆ ಪ್ರಿಯವಾಗುತ್ತದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *