ಬೆಂಗಳೂರು: ಮುಂದಿನ ತಿಂಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಕುರಿತು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮುಂದಿನ ತಿಂಗಳಿನಲ್ಲಿ ಹೆಚ್ಚಿನ ಮಳೆ ಸುರಿಯಬಹುದು ಎಂಬ ನಿರೀಕ್ಷೆ ಇದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಗರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಹಾಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿದ್ಧತೆ ಆರಂಭಿಸಿದ್ದು, ಇಂದಿನಿಂದಲೇ ನಗರದ ಪ್ರಮುಖ ಸ್ಥಳ ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳಿಗೆ ಚಾಲನೆ ಕೊಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನ ಮಾಡಿದೆ. ಕಳೆದ ವರ್ಷಗಳಲ್ಲಿ ಮಳೆಗೆ ಹಾನಿಗೀಡಾಗಿದ್ದ 356 ಪ್ರದೇಶಗಳಲ್ಲಿ ಸದ್ಯ ಬಿಬಿಎಂಪಿ ಮುಂಜಾಗ್ರತೆ ವಹಿಸಲು ಸಿದ್ಧತೆ ನಡೆಸಿದೆ. ಕಳೆದ ಬಾರಿ ಹೆಚ್ಚಿನ ಮಳೆಯಿಂದ ಸಮಸ್ಯೆ ಎದುರಿಸಿದ್ದ ನಗರದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ನಡೆಸಿದೆ. ಆದರೆ ಸದ್ಯ ಬಿಬಿಎಂಪಿ ಸಂಪೂರ್ಣ ಪ್ರಮಾಣದಲ್ಲಿ ಹೆಚ್ಚಿನ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿಲ್ಲ.
ಭಾರೀ ಮಳೆ ನಿರೀಕ್ಷೆ ಇರುವುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ವರ್ಷದಂತೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವ ಸಾಧ್ಯತೆಯಿದೆ. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿ ಅಪಾರ ಪ್ರಮಾಣದ ಉಂಟಾಗಿದ್ದ ಬೆನ್ನಲ್ಲೇ, ಸದ್ಯ ಮಾಹನಗರ ಭಾರೀ ಮಳೆ ನಿರೀಕ್ಷೆಯಲ್ಲಿದೆ. ಕೊಡಗು ಭಾಗದಲ್ಲಿ ಸತತವಾಗಿ ಸುರಿಯುತ್ತಿದ್ದ ಮಹಾಮಳೆ ಸದ್ಯ ಬಿಡುವು ನೀಡಿದ್ದು, ರಸ್ತೆ ಮೇಲೆ ಕುಸಿದ ಗುಡ್ಡ ತೆರವು ಕಾರ್ಯ ನಡೆಸಲಾಗುತ್ತಿದೆ. ಅಲ್ಲದೇ ಮಹಾಮಳೆಯಿಂದ ನಾಪತ್ತೆಯಾಗಿರುವ ಜನರ ಪತ್ತೆಕಾರ್ಯವನ್ನು ಡ್ರೋನ್ ಕ್ಯಾಮೆರಾ ಬಳಸಿ ಮಾಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv