ಕೇರಳ ಸಂತ್ರಸ್ತರಿಗೆ ಆಸರೆಯಾದ ಸನ್ನಿ ಲಿಯೋನ್!

Public TV
2 Min Read

ತಿರುವನಂತಪುರಂ: ಮಹಾಮಳೆ ಕೇರಳ ಜನತೆಯನ್ನು ತಲ್ಲಣಗೊಳಿಸಿದ್ದು, ಬಾಲಿವುಡ್‍ನ ಮಾದಕ ಬೆಡಗಿ ಸನ್ನಿ ಲಿಯೋನ್ ಕೇರಳ ಪ್ರವಾಹ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದ್ದಾರೆ ಎಂದು ಮಲೆಯಾಳಂ ಚಿತ್ರದ ನಿರ್ದೇಶಕರೊಬ್ಬರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಂಡು ಕೇಳರಿಯದ ಪ್ರವಾಹದಿಂದಾಗಿ ಕೇರಳ ತತ್ತರಿಸಿ ಹೋಗಿದ್ದು, ಬಹುತೇಕ ನಿವಾಸಿಗಳು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಹ ಪರಿಹಾರ ನಿಧಿಗೆ ಸನ್ನಿ ಲಿಯೋನ್ 5 ಕೋಟಿ ರೂ. ನೀಡಿದ್ದಾರೆ. ಸನ್ನಿ ಲಿಯೋನ್ ಸಹಾಯದ ಬಗ್ಗೆ ಮಲೆಯಾಳಂ ನಿರ್ದೇಶಕ, ಬರಹಗಾರರಾದ ಅಜಯ್ ದೇವಲೋಕ ಪ್ರತಿಕ್ರಿಯಿಸಿ ಸನ್ನಿ ಲಿಯೋನ್‍ಗೆ ಧನ್ಯವಾದ ತಿಳಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ನಿಮಗೆ ತುಂಬಾ ಧನ್ಯವಾದಗಳು. ನಮ್ಮ ಕಷ್ಟದ ಸಮಯದಲ್ಲಿ ನೀವು ನೀಡಿದ ಈ ಕೊಡುಗೆಯನ್ನು ಕೇರಳಿಗರು ಎಂದಿಗೂ ಮರೆಯುವುದಿಲ್ಲ. ನಾನು ಈ ಸಮಯದಲ್ಲಿ ನಿಮಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ನನ್ನ ಸ್ನೇಹಿತರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಸಂತ್ರಸ್ತರಿಗೆ ಸಾಕಷ್ಟು ಜನ ಪ್ರವಾಹ ಪರಿಹಾರ ನಿಧಿಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರು ಕ್ಷಣ ಕ್ಷಣಕ್ಕೂ ಅನುಭವಿಸುತ್ತಿರುವ ನನಗೆ ಅರ್ಥವಾಗುತ್ತಿದೆ. ಆದರೆ ಅದನ್ನು ಹೇಳಲು ಸಾಧ್ಯವಾಗಲ್ಲ. ಇಂದಿನಿಂದ ನಾನು ಹಲವು ವರ್ಷಗಳ ಕಾಲ ನಾನು ಸನ್ನಿ ಲಿಯೋನ್ ಅಭಿಮಾನಿಯಾಗಿರುತ್ತೇನೆ ಎಂಬ ಭಾವ ನನ್ನಲ್ಲಿ ಮೂಡುತ್ತಿದೆ. ಕೇರಳ ನಿಮಗೆ ಚಿರಋಣಿಯಾಗಿರುತ್ತದೆ ಎಂದು ಅಜಯ್ ದೇವಲೋಕ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ. ಕೇರಳ ಪ್ರವಾಹ ಪೀಡಿತರಿಗೆ 5 ಕೋಟಿ ರೂ. ನೀಡಿದ್ದರ ಕುರಿತು ಇದೂವರೆಗೂ ಸನ್ನಿ ಲಿಯೋನ್ ಎಲ್ಲಿಯೂ ಹೇಳಿಕೊಂಡಿಲ್ಲ.

ಈ ಹಿಂದೆ ಸನ್ನಿ ಲಿಯೋನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ತಮ್ಮ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಅವರಿಗೆ ಸನ್ನಿ ಲಿಯೋನ್ ಸಹಾಯ ಮಾಡಿದ್ದು, ಈ ಬಗ್ಗೆ ತನ್ನ ಇನ್ಸ್ ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಪ್ರಭಾಕರ್ ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ ಇದುವರೆಗೂ ಅವರ ಸಹಾಯಕ್ಕೆ ಯಾರು ಮುಂದೆ ಬರಲಿಲ್ಲ. ಆದರೆ ಈಗ ಸ್ವತಃ ಸನ್ನಿ ಲಿಯೋನ್ ಅವರೇ ಸಹಾಯ ಹಸ್ತ ಚಾಚಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *