ಯಾವುದೇ ಗಿಮಿಕ್ ಮಾಡಲು ಬಂದಿಲ್ಲ, ರೈತರ ಸಮಸ್ಯೆಗಳಿಗೆ ಹೆಗಲು ಕೊಡಲು ಬಂದಿದ್ದೇನೆ: ಸಿಎಂ

Public TV
2 Min Read

ಮಂಡ್ಯ: ಯಾವುದೇ ಗಿಮಿಕ್ ಮಾಡಲು ನಾನು ಭತ್ತ ನಾಟಿ ಮಾಡಲು ಬಂದಿಲ್ಲ, ರೈತರ ಸಮಸ್ಯೆಗಳಿಗೆ ಹೆಗಲು ಕೊಡಲು ಬಂದಿದ್ದೇನೆ ಎಂದು ಸಿಎಂ ಕುಮಾರಸ್ವಾಮಿಯವರು ವಿರೋಧ ಪಕ್ಷದ ಮುಖಂಡರುಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಸೀತಾಪುರ ಗ್ರಾಮದ ಜಮೀನಿನಲ್ಲಿ ಭತ್ತ ನಾಟಿ ಮಾಡಿದ ಬಳಿಕ ಮಾತನಾಡಿದ ಅವರು, ಬಹಳ ವರ್ಷಗಳ ನಂತರ ಈ ಪುಣ್ಯ ಕೆಲಸ ಸಿಕ್ಕಿದೆ. ನಿಮ್ಮೆಗೆಲ್ಲ ನನ್ನ ಅಭಿನಂದನೆಗಳು, ಈಗಾಗಲೇ ಸಹಕಾರಿ ಬ್ಯಾಂಕಿನ 9,000 ಕೋಟಿ ಹಣವನ್ನು ಸಾಲಮನ್ನಾ ಮಾಡಿ, ಅದಕ್ಕೆ ಹಣ ಬಿಡುಗಡೆ ಮಾಡಿದ್ದೇವೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಸಹ ಮನ್ನಾ ಮಾಡಲು ನಿರ್ಧಾರ ಮಾಡಲಾಗಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ನೀಡಿದ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ನನ್ನ ನಾಡಿನ ರೈತರಿಗೆ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ರೈತರು ಆತ್ಮಹತ್ಯೆಗೆ ಶರಣಾಗಬಾರದು, ನಾನು ನಿಮ್ಮೊಂದಿಗಿದ್ದೇನೆ. ವ್ಯವಸಾಯದಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸುವ ಯೋಜನೆಯನ್ನು ನಾನು ಹೊಂದಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಿಂಗಳಲ್ಲಿ ಒಂದು ದಿನ ಪ್ರತಿಯೊಂದು ಜಿಲ್ಲೆಯಲ್ಲೂ ರೈತರೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.

ದೇವರ ದಯೆಯಿಂದ ಹಾಗೂ ಮಂಡ್ಯದ ತಂದೆ-ತಾಯಿಗಳ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ದಯಮಾಡಿ ನನಗೆ ಅವಕಾಶ ಮಾಡಿಕೊಡು, ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿಕೊಡುತ್ತೇನೆ ಎಂದು ರೈತರಿಗೆ ಮನವಿ ಮಾಡಿಕೊಂಡರು.

ನಿಮ್ಮ ಕಷ್ಟಗಳಿಗೆ ನಿಮ್ಮ ಅಣ್ಣ-ತಮ್ಮನೆಂದು ತಿಳಿದು ನೀವು ನನ್ನನ್ನು ನೇರವಾಗಿ ನನ್ನ ಕೃಷ್ಣಾ ಕಚೇರಿ ಅಥವಾ ಮನೆಯಲ್ಲಿ ಭೇಟಿಯಾಗಲು ನಿಮಗೆ ಮುಕ್ತ ಅವಕಾಶವಿದೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ಹಿಡಿಯ ಬೇಡಿ ಎಂದು ಹೇಳಿದರು.

ತಮಿಳುನಾಡಿನಲ್ಲಿ ಕರುಣಾನಿಧಿಯವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿನ ರೈತ ಬಾಂಧವರು ದೇವೇಗೌಡರು ಹಾಗೂ ನನಗೆ ಜಯವಾಗಲಿ ಎಂದು ಜಯಘೋಶ ಹಾಕಿದ್ದಾರೆ. ಇದಕ್ಕೆ ಕಾರಣ ಕಾವೇರಿ ತಾಯಿ. ಕಾವೇರಿ ದಯೆಯಿಂದ ಎರಡು ರಾಜ್ಯದ ರೈತರು ನೆಮ್ಮದಿಯಾಗಿರುವ ಹಾಗೆ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *