ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಡೆಡ್‍ಲೈನ್- ಅಮಿತ್ ಶಾ ಖಡಕ್ ಸೂಚನೆ

Public TV
2 Min Read

-ನವೆಂಬರ್ ಒಳಗೆ ಉರುಳುತ್ತಾ ದೋಸ್ತಿ ಸರ್ಕಾರ..?

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯ ಹಲವು ಬದಲಾಣೆಗಳನ್ನು ಕಂಡಿದೆ. ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದ್ದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಇತ್ತ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಒಳಗಾಗಿ ದೋಸ್ತಿ ಸರ್ಕಾರ ಬೀಳಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹೆಚ್ಚು ದಿನಗಳಿದ್ದರೆ, ನಮಗೆ ಉಳಿಗಾಲವಿಲ್ಲ. ಲೋಕಸಭೆ ಚುನಾವಣೆ ತನಕ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇರಬಾರದು. ಹಾಗಾಗಿ ಕೈ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನವೆಂಬರ್ ವರೆಗೂ ಮಾಡಿ. ದೋಸ್ತಿ ಸರ್ಕಾರ ಇದ್ದುಕೊಂಡು ಲೋಕಸಭೆ ಚುನಾವಣೆಗೆ ಹೋದರೆ ಕರ್ನಾಟಕದಲ್ಲಿ ನಮಗೆ 11 ರಿಂದ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ನಮ್ಮ ಸರ್ಕಾರ ಬರುವ ರೀತಿ ಆಪರೇಷನ್ ನಡೆಸಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇವಲ ಲಿಂಗಾಯತ ಶಾಸಕರ ಬಗ್ಗೆ ಮಾತ್ರ ಗಮನ ಕೊಡದೇ ಹಿಂದುಳಿದ ವರ್ಗಗಳ ಶಾಸಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸಿ. ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಶಾಸಕರು ನಿಮ್ಮ ಗುರಿ. ಸಚಿವ ಸಂಪುಟದ ಬಳಿಕ ಉಂಟಾಗುವ ಅಸಮಾಧಾನ ಲಾಭವನ್ನು ನಯವಾಗಿ ನಾವು ಪಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಂದೇಶ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಕೆಲವು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಈ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಆಪರೇಷನ್ ಕಮಲ ನಡೆಸುವ ಅಗತ್ಯ ನಮಗಿಲ್ಲ. ಆರು ತಿಂಗಳಲ್ಲಿಯೇ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಬಿ.ಎಸ್‍ಯಡಿಯೂರಪ್ಪ ಮಾತನಾಡಿ, ನಾವು ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ವಿರೋಧ ಪಕ್ಷದಲ್ಲಿ ಇದ್ದಕೊಂಡೇ ನಾವು ಕೆಲಸ ಮಾಡುತ್ತೇವೆ ಅಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *