ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

Public TV
2 Min Read

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆದುಕೊಳ್ಳುವಂತೆ ದೇಶಾದ್ಯಂತ ವಿವಿಧ ಸಾರಿಗೆ  ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ.

ಸಂಘಟನೆಗಳು ಕರೆ ನೀಡಿದ್ದರೂ ಮಂಗಳವಾರ ಸಾರಿಗೆ ಬಂದ್ ಠುಸ್ ಪಠಾಕಿಯಾಗುವ ಸಾಧ್ಯತೆಯಿದೆ. ಬಿಎಂಟಿಸಿ ಸೇರಿದಂತೆ ಕೆಎಸ್​ಆರ್​ಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ನಮ್ಮ ಮೆಟ್ರೋ ಮತ್ತು ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿಲ್ಲ.

ಬಂದ್ ಗೆ ನಮ್ಮ ಮೆಟ್ರೋ ನೌಕರರು ನೈತಿಕ ಬೆಂಬಲ ನೀಡಿದ್ದಾರೆ. ನೌಕರರು ತಮ್ಮ ಪಾಳಿ ಮುಗಿದ ಬಳಿಕ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೆಟ್ರೋ ನೌಕರರ ಸಂಘ ಹೇಳಿದೆ. ಲಾರಿಗಳು ಎಂದಿನಂತೆ ರಸ್ತೆಗಿಳಿಯಲಿವೆ. ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ.

ಆಟೋ ಚಾಲಕರ ಸಂಘ ಮತ್ತು ಟ್ಯಾಕ್ಸಿ ಮಾಲೀಕರ ಸಂಘ ಬಂದ್‍ಗೆ ಬೆಂಬಲ ನೀಡಿದೆ. ಹೀಗಾಗಿ ಮಂಗಳವಾರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಾ ಓಲಾ-ಊಬರ್ ಹಾಗೂ ಇತರೆ ಟ್ಯಾಕ್ಸಿಗಳು ಸೇವೆಯಲ್ಲಿ ವ್ಯತ್ಯಯ ಉಂಟಾತ್ತದೆ. ಬಂದ್ ಗೆ ಬೆಂಬಲ ನೀಡಿರುವುದಾಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳರವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ನೌಕರರ ಒಕ್ಕೂಟವಾದ ಸಿಐಟಿಯು ದೇಶಾದ್ಯಂತ ನಡೆಯುತ್ತಿರುವ ಬಂದ್ ಗೆ ಎಲ್ಲಾ ವಾಹನ ಸವಾರರು ಸಹಕರಿಸುವಂತೆ ನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕರಪತ್ರ ಹಂಚುತ್ತಿದ್ದಾರೆ.

ಮಂಗಳವಾರದ ಸಾರಿಗೆ ಬಂದ್ ಗೆ ಎಐಟಿಯುಸಿ ಬೆಂಬಲ ನೀಡಿಲ್ಲ. ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಐಟಿಯುಸಿಯು ಮಸೂದೆಗೆ ವಿರೋಧವಿದ್ದರೂ ಮಂಗಳವಾರದ ಬಂದ್ ಗೆ ಪಾಲ್ಗೊಳ್ಳದಂತೆ ತನ್ನ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.

ಈ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಸಾರಿಗೆ ಉದ್ದಿಮೆ ಕಾರ್ಪೋರೇಟ್ ಕಂಪನಿಗಳ ವಶವಾಗಲಿದೆ. ಅಲ್ಲದೇ ದಂಡ ವಸೂಲಿ ಅವೈಜ್ಞಾನಿಕವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ. ಕೂಡಲೇ ಮಸೂದೆಯನ್ನು ಹಿಂಪಡೆಯುವಂತೆ ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಟೌನ್ ಹಾಲ್ ನಿಂದ ರ‍್ಯಾಲಿ ಪ್ರಾರಂಭವಾಗಿ ಫ್ರೀಡಂ ಪಾರ್ಕ್ ನಲ್ಲಿ ಅಂತಿಮಗೊಳ್ಳುತ್ತದೆ. ನೌಕರರು ಫ್ರೀಡಂ ಪಾಕ್‍ನಲ್ಲಿ ಬೃಹತ್ ಸಭೆಯನ್ನು ನಡೆಸಲಿದ್ದಾರೆ ಸಿದ್ಧತೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *