ಹೆಚ್‍ಡಿಕೆ, ಪರಂ ಸರ್ಕಾರದಲ್ಲಿ ಸಿದ್ದರಾಮಯ್ಯ ಆಪ್ತರೆಲ್ಲಾ ಔಟ್!

Public TV
1 Min Read

ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನೇಮಕವಾದವರಿಗೆ ಕುಮಾರಸ್ವಾಮಿ, ಪರಮೇಶ್ವರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಶಾಕ್ ನೀಡಿದೆ. ಕಾನೂನು ಸಲಹೆಗಾರ, ದೆಹಲಿ ವಿಶೇಷ ಪ್ರತಿನಿಧಿಗೆ ಸರ್ಕಾರ ಗೇಟ್‍ಪಾಸ್ ನೀಡಿದೆ.

ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾಗಿ ವಿಕಾಸ್ ಬಾನ್ಸೋಡೆ, ದೆಹಲಿಯ ವಿಶೇಷ ಹೆಚ್ಚುವರಿ ಪ್ರತಿನಿಧಿಯಾಗಿ ಸಲೀಂ ಅಹಮದ್ ಅವರನ್ನು ಸಿದ್ದರಾಮಯ್ಯ 2017ರ ಫೆಬ್ರವರಿಯಲ್ಲಿ ನೇಮಿಸಿದ್ದರು. ಇಬ್ಬರಿಗೂ ಹುದ್ದೆ ನೀಡಿ ರಾಜ್ಯ ಸಚಿವ ಸ್ಥಾನಮಾನವನ್ನು ಸಿದ್ದರಾಮಯ್ಯ ನೀಡಿದ್ದರು. ಈಗ ಇಬ್ಬರನ್ನು ಹುದ್ದೆಯಿಂದ ಮುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಕಾಸ್ ಬಾನ್ಸೋಡೆ ಯಾರು?
ಈ ಹಿಂದೆ ತಿರುಪತಿ ದೇವಸ್ಥಾನದ ಕಾನೂನು ಸಲಹೆಗಾರರಾಗಿ ವಿಕಾಸ್ ಬಾನ್ಸೋಡೆ ಕೆಲಸ ಮಾಡಿದ್ದರು. ಆಂಧ್ರಪ್ರದೇಶ ಹಾಗೂ ಉತ್ತರಾಂಚಲ ರಾಜ್ಯಗಳ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದ ಇವರು ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರದ್ವಾಜ್ ಅವರ ಕಾನೂನು ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಲು ನಿಯೋಜನೆಯಾಗಿದ್ದ ಲೋಕಾಯುಕ್ತದ ಎಸ್‍ಐಟಿಯ ಕಾನೂನು ಸಲಹೆಗಾರರನ್ನಾಗಿ ಇವರನ್ನು ನೇಮಕ ಮಾಡಲಾಗಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೀವ ಬೆದರಿಕೆ ಇದೆ ಎಂಬ ಹಿನ್ನೆಲೆಯಲ್ಲಿ ಝುಡ್ ಪ್ಲಸ್ ಸೆಕ್ಯೂರಿಟಿ ಪಡೆದುಕೊಂಡು ಬನ್ಸೊಡೆ ಸುದ್ದಿಯಾಗಿದ್ದರು.

ಸಲೀಂ ಅಹಮದ್ ಯಾರು?
ಎನ್‍ಎಸ್‍ಯುಐ ಅಧ್ಯಕ್ಷರಾಗಿದ್ದ ಸಲೀಂ ಅಹಮದ್ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಪರಿಷತ್‍ನ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದ ಇವರು ದೆಹಲಿಯಲ್ಲಿರುವ ನೆಹರು ಯುವಕ ಕೇಂದ್ರದ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಅವರು ಮಾಡಿರುವ ಸೇವೆಯನ್ನು ಪರಿಗಣಿಸಿ ಸಿದ್ದರಾಮಯ್ಯ ಸರ್ಕಾರ ದೆಹಲಿಯ ವಿಶೇಷ ಹೆಚ್ಚುವರಿ ಪ್ರತಿನಿಧಿಯನ್ನಾಗಿ ನೇಮಕ ಮಾಡಿತ್ತು. ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ದೊರಕಿಸುವುದು ಸೇರಿದಂತೆ ಹಲವು ಮಹತ್ತರ ಕಾರ್ಯನಿರ್ವಹಣೆಗಳ ಜವಾಬ್ದಾರಿಗಳ ಕೆಲಸಗಳನ್ನು ಸಲೀಂ ಅಹಮದ್ ಮಾಡುತ್ತಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *