ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

Public TV
1 Min Read

ಪಾಟ್ನಾ: ಆಟವಾಡುತ್ತಾ ಮೂರು ವರ್ಷದ ಬಾಲಕಿಯು 110 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

ಮೂರು ವರ್ಷದ ಸನ್ನೊ ಕೊಳವೆಬಾವಿಗೆ ಬಿದ್ದ ಬಾಲಕಿ. ಮಂಗಳವಾರ ತನ್ನ ಪೋಷಕರೊಂದಿಗೆ ಸನ್ನೊ ಅಜ್ಜನಾದ ಉಮೇಶ್ ನಂದನ್ ರವರನ್ನು ನೋಡಲು ಮುಂಗೇರಾದ ಮುರ್ಗಿಚಕ್ ಏರಿಯಾಕ್ಕೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಸಂಜೆ 4ರ ಸುಮಾರಿಗೆ ಮನೆಯ ಬಳಿಯಿದ್ದ ಸುಮಾರು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾಳೆ.

ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದೆ. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ಕೊಳವೆಬಾವಿಯ ಸುತ್ತ ಬಿಗಿಭದ್ರತೆ ಕೈಗೊಂಡಿದ್ದಾರೆ.

ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಯಾದ ಸಂಜೀವ್ ಕುಮಾರ್ ರವರು, ಬಾಲಕಿಗೆ ಈಗಾಗಲೇ ಆಮ್ಲಜನಕವನ್ನು ಪೂರೈಕೆ ಮಾಡಿದ್ದು, ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದೇವೆ. ಅಲ್ಲದೇ ಕೂಡಲೇ ಆಕೆಯನ್ನು ಕೊಳವೆಬಾವಿಯಿಂದ ಹೊರತೆಗೆಯುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ 40 ಅಡಿಗೂ ಹೆಚ್ಚಿನ ಬೃಹತ್ ಹೊಂಡ ನಿರ್ಮಿಸಿದ್ದು, ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವುದಾಗಿ ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿಯಾದ ಹರಿಶಂಕರ್ ಕುಮಾರ್ ರವರು, ಈಗಾಗಲೇ ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, 2 ಪೊಲೀಸ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ. ರಕ್ಷಣಾ ಕಾರ್ಯಚರಣೆಗೆ ಪೊಲೀಸ್ ಇಲಾಖೆಯಿಂದ ಬೇಕಾಗುವ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *