ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

Public TV
2 Min Read

ವಿಜಯಪುರ: ನಮ್ಮ ದೇಶಕ್ಕೆ ಪಾಕಿಸ್ತಾನಕ್ಕಿಂತ ಅಪಾಯ ಇರುವುದು ದೇಶದ ಬುದ್ಧಿಜೀವಿಗಳಿಂದ. ಅವರಿಂದ ದೇಶ ಹಾಳಾಗಿದ್ದು ನಾನು ಗೃಹ ಮಂತ್ರಿಯಾದರೆ ಅವರಿಗೆ ಗುಂಡು ಹಾರಿಸಿ ಅಂತಾ ಆದೇಶ ನೀಡುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ಜಮ್ಮು ಮತ್ತು ಕಾಶ್ಮೀರ ಜನರು ನಮ್ಮ ದೇಶದ ಗಾಳಿ, ನೀರು, ಅನ್ನ ಸೇವಿಸುತ್ತಾರೆ. ನಾವು ಕಟ್ಟುವ ತೆರಿಗೆಯ ಹಣದಲ್ಲಿ ಹೆಚ್ಚಿನ ಪ್ರಮಾಣವನ್ನು ಅವರಿಗೆ ಖರ್ಚು ಮಾಡಲಾಗುತ್ತದೆ. ಆದರೆ ಬುದ್ಧಿಜೀವಿಗಳು ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ, ಸೈನಿಕರ ಮೇಲೆ ಕಲ್ಲು ಎಸೆಯುತ್ತಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

ದೇಶ ವಿರೋಧಿ ಜಟುವಟಿಕೆ ಮಾಡುವವರ ಮೇಲೆ ಹಲ್ಲೆ ಮಾಡಿದಾಗ ಮಾನವ ಹಕ್ಕು ಸಮಿತಿ ಮಧ್ಯೆ ಪ್ರವೇಶಿಸಿ ಅವರನ್ನು ರಕ್ಷಿಸುತ್ತಾರೆ. ಹಾಗಾದರೆ ಸೈನಿಕರ ಮೇಲೆ ಆಗುವ ಷೋಷಣೆಯನ್ನು ತಡೆಯಲು ಯಾವುದೇ ಸಮಿತಿ ಮುಂದೆ ಬರುವುದಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇದ್ದಿದ್ದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ಜಾರಿ ಆಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಿಧಿಯನ್ನು ತೆಗೆದು ಹಾಕಲಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಎಂದಿಗೂ ಗೆಲ್ಲುವುದಿಲ್ಲ ಎಂದು ನುಡಿದರು.

ಯೋಧರು -60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವು 3 ಕಿ.ಮೀ. ಹೋಗುವುದಕ್ಕೆ ಪರದಾಡುತ್ತೇವೆ. ಇದು ನಮ್ಮ ದೇಶದ ದುರಂತವಾಗಿದೆ. ಇಸ್ರೇಲ್ ನಲ್ಲಿ ಹುಟ್ಟಿದ ಮಗುವು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇಂತಹ ವ್ಯವಸ್ಥೆ ನಮ್ಮ ದೇಶದಲ್ಲಿ ಬರಬೇಕು ಎಂದ ಶಾಸಕರು, ಪಾಕಿಸ್ತಾನ ಭೂಪಟದಲ್ಲಿ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಸೈನ್ಯಕ್ಕಿದೆ. ಪಾಕಿಸ್ತಾನ ಸೈನಿಕರು ಏನೂ ಗೆಲ್ಲದೆ ಎದೆಯ ಮೇಲೆ ಮೆಡಲ್‍ಗಳನ್ನ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಸೈನಿಕರು ಸಾಯುವುದಕ್ಕೆ ಗಡಿಗೆ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸದೆ, ಭಾರತದ ಗಡಿಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

Share This Article
2 Comments

Leave a Reply

Your email address will not be published. Required fields are marked *