ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

Public TV
2 Min Read

ಮಂಡ್ಯ: ಆಷಾಢ ಮಾಸ ಅಂದರೆ ಆದಿ ಶಕ್ತಿ, ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೈವ ಆರಾಧಿಸುವುದು ವಿಶೇಷ. ಆದರೆ ಜಿಲ್ಲೆಯ ಆಬಲವಾಡಿಯಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ ಇಲ್ಲಿ ಹರಿಸೇವೆ ಮಾಡುತ್ತಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿರೋ ತಿಮ್ಮಪ್ಪ ದೇವರಿಗೆ ಆಷಾಢ ಮಾಸದ ಮೊದಲ ಶನಿವಾರ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸೇರಿದಂತೆ ದೇವರ ಮನೆತನದವರು ಮಾಡಿಕೊಂಡು ಬರುತ್ತಿದ್ದಾರೆ. ಈ ವಿಶೇಷ ಪೂಜೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರಂಭಗೊಂಡು, ಶನಿವಾರ ರಾತ್ರಿಯೆಲ್ಲಾ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಈ ತಿಮ್ಮಪ್ಪನ ಆರಾಧಕರು ಉತ್ಸವ ಮೂರ್ತಿಯನ್ನು ಒತ್ತು ಮೆರವಣಿಗೆ ಮಾಡಿ ಹರಕೆ ತೀರಿಸಿದರು. ನಂತರ ಮುಂಜಾನೆಯೇ ಇಲ್ಲಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದವನ್ನು ನೀಡಲಾಯಿತು. ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಈ ಬಾರಿ ಪ್ರಸಾದ ಸೇವಿಸುವ ಭಕ್ತರಿಗೆ ಸ್ವಯಂ ಸೇವಕರಿಂದ ಸ್ಟೀಲ್ ಲೋಟದಲ್ಲಿ ನೀರು ನೀಡಲಾಯಿತು.

ದೇವರ ಉತ್ಸವ ಆರಂಭ ಆಗುತ್ತಿದ್ದಂತೆ ಟನ್ ಗಟ್ಟಲೆ ಅನ್ನವನ್ನು ಬೇಯಿಸುವ ಜೊತೆಗೆ ಕೊಪ್ಪರಿಕೆಗಳಲ್ಲಿ ಸಾಂಬಾರು ಮಾಡಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. ನಂತರ ದೇವರ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಸುತ್ತ ಭಕ್ತರಿಗೆ ಪ್ರಸಾದದ ಹಂಚಿಕೆ ಕಾರ್ಯ ಆರಂಭ ಆಗುತ್ತದೆ. ಇಲ್ಲೆಗೆ ಬಂದ ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ಹಂಚಿಕೆ ಮಾಡೋದು ಇಲ್ಲಿನ ವಿಶೇಷ. ಎಲ್ಲರನ್ನೂ ಸರಥಿ ಸಾಲಿನಲ್ಲಿ ಕೂರಿಸಿ, ತಾವರೆ ಎಲೆಯನ್ನು ಮೊದಲು ಕೊಡಲಾಗುತ್ತದೆ. ನಂತರ ದೊಡ್ಡದೊಡ್ಡ ಪಾತ್ರೆಗಳಲ್ಲಿ ಒಮ್ಮೆ ಮಾತ್ರ ಅನ್ನವನ್ನು ಎಲೆಗೆ ಬಡಿಸಲಾಗುತ್ತದೆ. ಹಿಂದೆಯಿಂದಲೇ ಸಾಂಬರು ಹಾಕಲಾಗುತ್ತದೆ. ಮತ್ತೊಂದು ವಿಚಾರ ಅಂದರೆ ಇಲ್ಲಿ ಎಲ್ಲರಿಗೂ ಹಿಡಿ ಅನ್ನ ಹಾಕೋದು. ಒಮ್ಮೆ ಹಾಕಿದರೆ ಇಡೀ ತಾವರೆ ಎಲೆಯ ತುಂಬೆಲ್ಲಾ ಈ ಹಿಡಿ ಅನ್ನ ಹರಡಿಕೊಳ್ಳುತ್ತದೆ ಎಂದು ಅರ್ಚಕ ಹರಿಪ್ರಸಾದ್ ಹೇಳಿದ್ದಾರೆ.

ಈ ಉತ್ಸವದಲ್ಲಿ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಪಾಲ್ಗೊಂಡಿದ್ದರು. ಈ ದೇವರ ಮನೆತನದವರು ಪ್ರತಿ ವರ್ಷ ಬಂದು ತಾವರೆ ಎಲೆ ಊಟ ಮಾಡಿ, ಪೂಜೆ ಸಲ್ಲಿಸಿದರೆ ಹರಕೆ ತೀರಿಸಿದಂತೆ ಎಂಬ ಪ್ರತೀತಿಯಿದ್ದು, ಈ ವರ್ಷವೂ ತೋಪಿನ ತಿಮ್ಮಪ್ಪನ ಹರಿಸೇವೆ ಅದ್ಧೂರಿಯಾಗಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *