ಮಲೆನಾಡನ್ನೇ ನಾಚಿಸುತ್ತಿದೆ ಕೋಟೆನಾಡಿನ ಜೋಗಿಮಟ್ಟಿ ಗಿರಿಧಾಮ

Public TV
1 Min Read

ಚಿತ್ರದುರ್ಗ: ಕೋಟೆನಾಡು ಅಂದಾಕ್ಷಣ ಕೋಟೆ ಕೊತ್ತಲುಗಳು ಮಾತ್ರ ಕಣ್ಮುಂದೆ ಬರುತ್ತವೆ. ಆದರೆ ಮಲೆನಾಡನ್ನೇ ನಾಚಿಸುವ ನಿಸರ್ಗಧಾಮವೊಂದು ಕೋಟೆನಾಡು ಚಿತ್ರದುರ್ಗದಲ್ಲಿದೆ.

ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣವೆನಿಸಿರೋ ಕೋಟೆನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರುವ ಬಯಲು ಸೀಮೆಯೆಂದು ಭಾವಿಸಿದ್ದಾರೆ. ಆದರೆ ಚಿತ್ರದುರ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅವರ ಭಾವನೆಯನ್ನ ಅಲ್ಲೆಗೆಳೆಯುವಂತಿದೆ. ಸುಮಾರು 10ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಶಾಲವಾಗಿರುವ ಈ ಕಾಯ್ದಿಟ್ಟ ಅರಣ್ಯ ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ. ಇಂತಹ ಅಪರೂಪದ ಗಿರಿಧಾಮ ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ಮಂಜಿನ ಮಡಿಕೇರಿ, ಸೊಬಗಿನ ಮಲೆನಾಡನ್ನೇ ನಾಚಿಸುವಂತೆ ರೂಪುಗೊಳ್ಳುತ್ತದೆ.

ಕಳೆದ ಒಂದು ವಾರದಿಂದ ಜಿನುಗುತ್ತಿರುವ ಮಳೆಯ ಎಫೆಕ್ಟ್ ನಿಂದಾಗಿ ಜೋಗಿಮಟ್ಟಿ ಮತ್ತಷ್ಟು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಮೋಡದ ಅಲೆಗಳು ಜೋಗಿಮಟ್ಟಿಯ ಗಿರಿಧಾಮಗಳಿಗೆ ಮುತ್ತಿಟ್ಟು ನಲಿಯುತ್ತಿವೆ. ಜೋಗಿಮಟ್ಟಿ ಮೇಲ್ಭಾಗದಲ್ಲಿರುವ ವೀವ್ ಪಾಯಿಂಟ್ ಹಾಗೂ ಅತಿಥಿಗೃಹದ ಬಳಿಯ ಪ್ರಾಕೃತಿಕ ಸೊಬಗಂತೂ ಮೈಮರೆಸುತ್ತದೆ. ಹೀಗಾಗಿ ಕಳೆದ ವಾರದಿಂದ ಜೋಗಿಮಟ್ಟಿಗೆ ತೆರಳಿ ಸೌಂದರ್ಯದ ಸವಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ.

ಜೋಗಿಮಟ್ಟಿಯ ನಿಸರ್ಗದಲ್ಲಿ ಪರಿಸರ ಪ್ರಿಯರು ಸೆಲ್ಫಿ ತೆಗೆದುಕೊಳ್ಳುವುದು, ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯ ಆಗಿವೆ. ಕೊರೆಯುವ ಚಳಿ, ಬಿರುಗಾಳಿ ಮತ್ತು ಕೈಗೆ ಸಿಗುವ ಮೋಡಗಳ ನಡುವೆ ತೇಲುವ ಜನ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

ಈ ಕಾಯ್ದಿಟ್ಟ ಅರಣ್ಯ ಪ್ರದೇಶ ಇತ್ತೀಚೆಗೆ ವನ್ಯಜೀವಗಳ ಧಾಮವಾಗಿಯೂ ಘೋಷಿಸಲ್ಪಟ್ಟಿದೆ. ಯಾಕಂದರೆ ಇಲ್ಲಿ ಕರಡಿ, ಜಿಂಕೆ, ಚಿರತೆಯಂಥ ಪ್ರಾಣಿಗಳಿವೆ. ನವಿಲು ಮತ್ತಿತರೆ ಪಕ್ಷಿಗಳಂತೂ ಲೆಕ್ಕವಿಲ್ಲದಷ್ಟಿವೆ. ಹೀಗಾಗಿ ನಿತ್ಯ ನೂರಾರು ಜನ ಈ ನಿಸರ್ಗ ಸೌಂದರ್ಯ ಸವಿಯಲು ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಈ ಜೋಗಿಮಟ್ಟಿಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಅನ್ನೋದು ವಕೀಲ ವಿರುಪಾಕ್ಷಿಯವರು ಅಭಿಪ್ರಾಯ ವ್ಯ್ತಪಡಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ಮಲೆನಾಡನ್ನೇ ನಾಚಿಸುವಂತೆ ಹಸಿರು ಸೀರೆಯನ್ನು ತೊಟ್ಟು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದು, ಬರದನಾಡಿನ ಬಯಲು ಸೀಮೆಯಲ್ಲಿರುವ ಈ ಜೋಗಿಮಟ್ಟಿ ಹಸಿರುಸಿರಿಯಾಗಿ ಕಂಗೊಳಿಸುತ್ತಿರೋದು ದುರ್ಗದ ಜನರನ್ನು ಬೆರಗುಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *