ಚಿಕ್ಕಮಗಳೂರು: ಟಿಕೆಟ್ ವಿಚಾರವಾಗಿ ನಿರ್ವಾಹಕ ಹಾಗೂ ಪ್ರಯಾಣಿಕರ ನಡುವೆ ಗಲಾಟೆಯಾಗಿ ಪ್ರಯಾಣಿಕನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಧರ್ಮಸ್ಥಳದಿಂದ ಹಾಸನದ ಕಡೆ ಬರುತ್ತಿದ್ದ ಬಸ್ ಡ್ರೈವರ್ ಗೆ ಅನಾರೋಗ್ಯದ ನಿಮಿತ್ತ ಕೊಟ್ಟಿಗೆಹಾರದ ಬಳಿ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳಿಸುವಂತೆ ಸಲಹೆ ನೀಡಿದ್ದಾನೆ. ಈ ವೇಳೆ 35 ಪ್ರಯಾಣಿಕರನ್ನು ಕಂಡಕ್ಟರ್ ಎರಡು ಬಸ್‍ಗೆ ಹತ್ತಿಸಿದ್ದಾರೆ.
ಆದರೆ ಆ ಎರಡು ಬಸ್ಸಿನಲ್ಲೂ ಪ್ರಯಾಣಿಕರಿದ್ದ ಕಾರಣ ಸುಮಾರು ಜನರಿಗೆ ಸೀಟು ಸಿಕ್ಕಿಲ್ಲ. ಈ ವೇಳೆ ಪ್ರಯಾಣಿಕನೋರ್ವ ನಾನು ಧರ್ಮಸ್ಥಳದಿಂದ ಕುತ್ಕೊಂಡು ಬಂದಿದ್ದೇನೆ, ನನಗೆ ಸೀಟ್ ಬೇಕು, ನಾನು ನಿಂತುಕೊಂಡು ಹೋಗೋದಿಲ್ಲ ಎಂದು ಗಲಾಟೆ ಮಾಡಿದ್ದಾನೆ.
ಈ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ್ದಾರೆ. ಇಬ್ಬರೂ ಕೈ-ಕೈ ಮಿಲಾಯಿಸಿ ಬಸ್ ಸ್ಟ್ಯಾಂಡ್‍ನಲ್ಲೇ ಹೊಡೆದಾಡಿಕೊಂಡಿದ್ದಾರೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ.