ದೋಸ್ತಿ ಸರ್ಕಾರದಲ್ಲಿ ಸಚಿವ ಜಮೀರ್ ರನ್ನು ಕಡೆಗಣಿಸುವಂತಿಲ್ಲ: ಜಮೀರ್​ಗೆ ನಡಹಳ್ಳಿ ಟಾಂಗ್

Public TV
1 Min Read

ವಿಜಯಪುರ: ಆಹಾರ ಹಾಗೂ ನಾಗರೀಕ ಸರಬರಾಜು ಸಚಿವ ಜಮೀರ್ ಅಹ್ಮದ್ ಅವರು ಓರ್ವ ಪವರ್ ಪುಲ್ ರಾಜಕಾರಣಿ. ದೋಸ್ತಿ ಸರ್ಕಾರದಲ್ಲಿ ಜಮೀರ್ ಅವರನ್ನು ಕಡೆಗಣಿಸುವಂತಿಲ್ಲ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಸಚಿವ ಜಮೀರ್ ಅವರಿಗೆ ಹೊಸ ಕಾರು ನೀಡಬೇಕು. ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರ ಸಂಕಷ್ಟ ಎದುರಿಸುತ್ತದೆ ಎಂದು ವ್ಯಂಗ್ಯವಾಡಿದ ನಡಹಳ್ಳಿ ಅವರು, ಹಜ್ ಭವನಕ್ಕೆ ಟಿಪ್ಪು ಹೆಸರಿನ ಬದಲು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನು ಇಡುವುದು ಉತ್ತಮ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಸರ್ಕಾರ ರಚನೆಯಾಗಿ ಒಂದು ತಿಂಗಳೇ ಕಳೆದಿದೆ, ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಮಿಶ್ರ ಸರ್ಕಾರ ಆಡಳಿತಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲ್ಲ ಎಂದು ಹೇಳಿರಲಿಲ್ಲ. ಇಂತಹ ನೆಪ ಹೇಳಿ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅವರು ಪ್ರಯತ್ನಿಸಬಾರದು ಎಂದು ಸಿಎಂ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರ್ಕಾರ ಸಾಂದರ್ಭಿಕ ಶಿಶು ಎಂದು ಈ ಹಿಂದೆ ಕುಮಾರಸ್ವಾಮಿ ಅವರು ಹೇಳಿದ್ದರು. ಹಾಗಾದರೆ ಸಮಿಶ್ರ ಸರ್ಕಾರಕ್ಕೆ ತಂದೆ-ತಾಯಿ ಎರಡೂ ಕಾಂಗ್ರೆಸ್ ನಾಯಕರಾಗಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ಕಾಂಗ್ರೆಸ್ಸಿನ ಕೆಲವು ನಾಯಕರು ಜೆಡಿಎಸ್ ಜೊತೆಗೆ ಸೇರಿ ಸಮಿಶ್ರ ಸರ್ಕಾರ ಮಾಡಿಕೊಂಡರು. ಒಂದು ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಿದ್ದರೆ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಬಯಲಾಗುತ್ತಿತ್ತು ಎಂದು ನಡಹಳ್ಳಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *