ಚೆನ್ನೈ: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಸರ್, ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತಾ ಮುತ್ತಿಗೆ ಹಾಕಿದ್ದಾರೆ.
ತಮಿಳುನಾಡು ರಾಜ್ಯದ ತಿರುವಳ್ಳರ್ ಇಲಾಖೆಯ ವೇಲಿಯಾ ಗ್ರಾಮದ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ಭಗವಾನ್ (28) ಅವರಿಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು. ಬುಧವಾರ ವೇಲಿಯಾ ಗ್ರಾಮದ ಶಾಲೆಯಲ್ಲಿ ಕೊನೆಯ ದಿನದ ಡ್ಯುಟಿ ಮುಗಿಸಿ ವರ್ಗಾವಣೆ ಪತ್ರ ಪಡೆದು ಹೋಗುತ್ತಿದ್ದರು.
ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಾಗುತ್ತಿರುವ ಸುದ್ದಿ ಕೇಳಿದ ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡಿ ಅಂತಾ ಭಗವಾನ್ ಅವರಿಗೆ ಮುತ್ತಿಗೆ ಹಾಕಿ ಕಣ್ಣೀರು ಹಾಕಿದ್ದಾರೆ. ಭಗವಾನ್ ಶಾಲೆಯಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಮಕ್ಕಳ ವಿರೋಧದ ಕಾರಣ ಭಗವಾನ್ ಅವರ ವರ್ಗಾವಣೆಯ ಆದೇಶವನ್ನು 10 ದಿನಗಳವರೆಗೆ ಮುಖ್ಯಶಿಕ್ಷಕ ಅರವಿಂದನ್ ತಡೆಹಿಡಿದಿದ್ದಾರೆ.
ಬುಧವಾರ ನಾನು 10 ಗಂಟೆಗೆ ಹೊಸ ಶಾಲೆಗೆ ಹಾಜರಾಗಬೇಕಿತ್ತು. ಹೋಗುವ ವೇಳೆ ಬಂದ ಮಕ್ಕಳು ನನಗೆ ಮುತ್ತಿಗೆ ಹಾಕಿ ತಡೆದಿದಲ್ಲದೇ, ನನ್ನ ಬೈಕ್ ಕೀ ಮತ್ತು ಬ್ಯಾಗ್ ಕಸಿದುಕೊಂಡರು. ಮಕ್ಕಳನ್ನು ನೋಡಿದಾಗ ನನ್ನ ಸೇವೆಗೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಮನವರಿಕೆ ಆಯಿತು ಎಂದು ಶಿಕ್ಷಕ ಭಗವಾನ್ ಒಂದು ಕ್ಷಣ ಭಾವುಕರಾದ್ರು.
ಭಗವಾನ್ ಶಿಕ್ಷಕರೇ ಶಾಲೆಯಲ್ಲಿ ಇಂಗ್ಲಿಷ್ ಬೋಧನೆ ಮಾಡಬೇಕೆಂದು ಮಕ್ಕಳು ಹಾಗು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಭಗವಾನ್ ತಮ್ಮ ಸರಳ ವ್ಯಕ್ತಿತ್ವದಿಂದ ಮಕ್ಕಳಿಗೆ ತುಂಬಾ ಹತ್ತಿರವಾಗಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಕ್ಕಳಿಗೆ ಉತ್ಸಾಹದಿಂದ ಪಾಠ ಮಾಡುತ್ತಿದ್ದರು. ಮಕ್ಕಳ ಮನವಿಯ ಮೇರೆಗೆ 10 ದಿನಗಳವರೆಗೆ ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಮುಖ್ಯ ಶಿಕ್ಷಕ ಅರವಿಂದನ್ ಸ್ಪಷ್ಟಪಡಿಸಿದ್ದಾರೆ.