ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

Public TV
1 Min Read

ಮೈಸೂರು: ಕಷ್ಟಪಟ್ಟು 4 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ನೀರಿನಲ್ಲಿ ಮುಳುಗಿ ನಾಶವಾಗಿದ್ದನ್ನು ಕಂಡ ರೈತರೊಬ್ಬರು ಅದೇ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸವಯ್ಯ ಬೆಳೆ ನಾಶವಾಗಿದನ್ನು ಕಂಡು ಆತ್ಮಹತ್ಯೆಗೆ ಯತ್ನಿಸಿದ ರೈತ. ಕುಪ್ಪರವಳ್ಳಿ ಗ್ರಾಮ ನಿವಾಸಿಯಾದ ಬಸವಯ್ಯ 4 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಆದರೆ ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹರಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿತ್ತು. ಇದನ್ನು ಕಂಡ ಬಸವಯ್ಯ ತನಗೆ ಈ ಜೀವನ ಬೇಡ ಎಂದು ಗೋಳಾಡುತ್ತಾ ಆತ್ನಹತ್ಯೆ ಯತ್ನಿಸಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಯುವಕರಿಬ್ಬರು ಬಸಯ್ಯರನ್ನು ದಡಕ್ಕೆ ಕರೆ ತಂದು ರಕ್ಷಣೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಮಳೆನಾಡು ಸೇರಿದಂತೆ ಕಪಿಲ ನದಿಯ ಪಾತ್ರದಲ್ಲಿ ಭಾರೀ ಮಳೆಯಾದ ಕಾರಣ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗಿತ್ತು. ಮುಂಗಾರು ಈ ಬಾರಿ ರಾಜ್ಯದಲ್ಲಿ ಬಹುಬೇಗ ಆರಂಭವಾಗಿದ್ದರಿಂದ ಮಳೆಯ ಪ್ರಮಾಣವು ಹೆಚ್ಚಾಗಿದ್ದು ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ.

ನಂಜನಗೂಡು ಸೇರಿದಂತೆ ಕಬಿನಿ ಜಲಾಶಯ ಪಾತ್ರದ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದ್ದು, ಸುಮಾರು 50 ಎಕರೆಗೂ ಹೆಚ್ಚಿನ ಬೆಳೆ ನೀರಿನಲ್ಲಿ ಮುಳುಗಿದೆ. ಲಕ್ಷ ಲಕ್ಷ ಸಾಲ ಮಾಡಿ ಬೆಳೆದ ಬೆಳೆ ಕೈ ಸೇರುವ ಮುನ್ನವೇ ನೀರು ಪಾಲಾಗಿದೆ. ಜಲಾಶಯದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಬೆಳೆ ಕಟಾವು ಮಾಡಲು ಇನ್ನು 15 ದಿನಗಳ ಸಮಯ ಬೇಕಾಗಿದ್ದರಿಂದ ರೈತರು ಸಹ ಅಸಹಾಯಕರಾಗಿದ್ದಾರೆ.

https://www.youtube.com/watch?v=HbexpBIvzhA

Share This Article
Leave a Comment

Leave a Reply

Your email address will not be published. Required fields are marked *