ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

Public TV
1 Min Read

ನವದೆಹಲಿ: ಕೊಳೆಯಾದ, ಹರಿದ 2000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಆರ್ ಬಿಐ ಹೊಸ ನಿಯಮಾವಳಿಗಳನ್ನು ತರುವುದಾಗಿ ಹೇಳಿದೆ.

ಬಹಳಷ್ಟು ಬ್ಯಾಂಕ್ ಗಳು ಕೊಳೆಯಾದ ಹಾಗೂ ಹರಿದ 2000 ರೂ ಮುಖಬೆಲೆಯ ನೋಟುಗಳನ್ನ ಸ್ವೀಕರಿಸುತ್ತಿಲ್ಲ. ಆರ್ ಬಿಐ ನಿಯಮಾವಳಿಗಳಲ್ಲಿ 2000 ರೂ ನೋಟು ವಿನಿಮಯದ ಬಗ್ಗೆ ಪ್ರಸ್ತಾಪ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

2009 ರ ಆರ್ ಬಿಐ ನೋಟು ವಿನಿಮಯದ ನಿಯಮದ ಪ್ರಕಾರ 50 ರೂಪಾಯಿ ಮೇಲ್ಪಟ್ಟ ಎಲ್ಲಾ ಕೊಳೆಯಾದ ಹಾಗೂ ಹರಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸುತ್ತದೆ. ಹರಿದು ಹೋಗಿರುವ ನೋಟಿನ ಒಂದು ಭಾಗ ಇದ್ದು 70, 75, 80 ಮತ್ತು 84 ಚದುರ ಸೆಂಟಿಮೀಟರ್ ನಷ್ಟು ಇದ್ದರೂ ವಿನಿಮಯ ಮಾಡಿಕೊಳ್ಳಬಹುದು ಎಂದು ನಿಯಮದಲ್ಲಿ ಹೇಳಿದೆ.

ನವೆಂಬರ್ 8, 2016 ರ 500 ಹಾಗೂ 1000 ರೂ ಅಪನಗದೀಕರಣ ದ ನಂತರ 1,000 ರೂ ಬದಲು 2000 ರೂ. ಮುಖಬೆಲೆಯ ನೋಟು ಬಂದಿದೆ. 1000 ರೂಗಳಿಗೆ ಇದ್ದ ನಿಯಮಗಳನ್ನು ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳಿಗೆ ಅಳವಡಿಸಿ ವಿನಿಮಯ ಮಾಡಲು ಒಪ್ಪುತ್ತಿಲ್ಲ.

ಕಳೆದ ಬಾರಿ ಜುಲೈ 3, 2017 ರಂದು ಆರ್ ಬಿಐ ನಿಯಮಾವಳಿಗಳನ್ನ ಮಾರ್ಪಾಡು ಮಾಡಿತ್ತು. ಮಣ್ಣಾದ ನೋಟು ಎಂದರೆ ಹೆಚ್ಚು ಕೈಯಿಂದ ಕೈಗೆ ಬಳಕೆಯಾಗಿ ಹಳೆಯದಾಗಿರುವ ನೋಟು ಹಾಗೂ ಇಬ್ಬಾಗವಾದ ನೋಟನ್ನು ಸೇರಿಸಿದ್ದು ಅಗತ್ಯವಿರುವ ನೋಟಿನ ಅಂಶಗಳು ಇರತಕ್ಕದ್ದು ಹಾಗೂ ಅಂತಹ ನೋಟುಗಳನ್ನು ಬ್ಯಾಂಕ್ ಗಳು ಸ್ವೀಕರಿಸಬಹುದು ಎಂದು ಆರ್ ಬಿಐ ತಿಳಿಸಿದೆ.

ಹರಿದ ನೋಟುಗಳ ವಿನಿಮಯಕ್ಕೆ ಆರ್ ಬಿಐ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಿದರೂ ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಕೊಳೆಯಾದ ಮತ್ತು ಹರಿದ ಹೊಸ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಹೊಸ ನಿಯಮಾವಳಿಗಳನ್ನು ರಚಿಸಿದ್ದು ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ನಿರ್ದೇಶಕ ಮನಮೋಹನ್ ಸಚ್ದೇವ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *