ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

Public TV
2 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ 9 ತಿಂಗಳ ಬಳಿಕ ರೋಚತೆ ಸಿಕ್ಕಿದ್ದು, ಹಂತಕ ಆರೋಪಿ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಬಂಧಿಸುವಲ್ಲಿ ಎಸ್‍ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಸೆಪ್ಟಂಬರ್ 5ರ ರಾತ್ರಿ ಗೌರಿ ಲಂಕೇಶ್ ಹತ್ಯೆ ನಡೆದಿದ್ದು ಹೇಗೆ ಎಂಬುದರ ಬಗ್ಗೆ ರೋಚಕ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ. ಅಂದು ಹತ್ಯೆಯ ದಿನ ಹಂತಕ ಬರೋಬ್ಬರಿ ಆರು ಗುಂಡುಗಳನ್ನು ಹಾರಿಸಿದ್ದ. ಅವುಗಳಲ್ಲಿ ನಾಲ್ಕು ಗೌರಿ ದೇಹ ಸೇರಿದ್ದು, ಎರಡು ಮಿಸ್ ಆಗಿ ಗೋಡೆಗೆ ತಗುಲಿದ್ದವು.

ಹತ್ಯೆಗೆ ಪಾತಕಿಗಳ ಪ್ಲಾನ್ ಹೇಗಿತ್ತು?
ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸೋದು ಕನ್ಫರ್ಮ್ ಆದರೆ ನೇರವಾಗಿ ತಲೆಗೆ ಶೂಟ್ ಮಾಡಬೇಕು. ಅರ್ಧ ಜೀವ ಮಾಡಿ ಹಿಂದಕ್ಕೆ ಮರಳಿ ಬರಬಾರದು. ಗುಂಡು ಹಾರಿಸಿದ ಬಳಿಕ ಜೀವ ಹೋಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಬರಬೇಕೆಂದು ಪರಶುರಾಮ್ ಗೆ ಸೂಚಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

 

ಹತ್ಯೆಯ ಕ್ಷಣದಲ್ಲಿ ಏನೇನಾಯ್ತು?
ಸೆಪ್ಟಂಬರ್ 5ರಂದು ಕಚೇರಿಯಿಂದ ಮನೆಗೆ ಬಂದ ಗೌರಿ ಅವರು ಕಾರ್ ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೊರಟ್ಟಿದ್ದರು. ಈ ವೇಳೆ ಗೌರಿ ತಲೆಗೆ ಹಿಂಬದಿಯಿಂದ ಫೈರ್ ಮಾಡಲು ಹಂತಕ ರೆಡಿಯಾಗಿದ್ದನು. ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ನೋಡಿದಾಗ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಅವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು.

ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು.

ಪ್ಲಾನ್ ಹೇಗಿತ್ತು?: ಪರಶುರಾಮ್ ಕೊಲೆ ಮಾಡೋದಕ್ಕೆ ಎರಡು ತಿಂಗಳು ಮೊದಲು ಹತ್ಯೆ ನಡೆಸುವ ಬಗ್ಗೆ ಅಭ್ಯಾಸ ಮಾಡಿದ್ದನು. ಯಾವ ರೀತಿ ಕೊಲೆ ಮಾಡ್ಬೇಕು ಅನ್ನೋ ಬಗ್ಗೆ ಅಮೋಲ್ ಕಾಳೆ ತರಬೇತಿ ನೀಡಿದ್ದ. ಬೆಳಗಾವಿ, ಪುಣೆಯಲ್ಲಿ ಎರಡು ತಿಂಗಳ ಟ್ರೈನಿಂಗ್ ಪಡೆದ ಬಳಿಕ ಗೌರಿ ಹತ್ಯೆಯ ದಿನ ಹತ್ತಿರವಾಗಿತ್ತು. ಪರಶುರಾಮ್ ಸೆಪ್ಟೆಂಬರ್ 4 ರಂದೇ ಕೊಲ್ಲುವ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದನು. ಮೊದಲ ಬಾರಿಗೆ ಬೆಂಗಳೂರಿಗೆ ಬಂದವನೇ ನವೀನ್ ಜೊತೆ ಸೇರಿ ಗೌರಿ ಮನೆಯ ಸುತ್ತ ಸುಳಿದಾಡಿದ್ದಾನೆ.

ಹಂತಕರು ಸೆಪ್ಟಂಬರ್ 4ರಂದೇ ಗೌರಿಯವರನ್ನು ಕೊಲ್ಲಲು ಡೇಟ್ ಫಿಕ್ಸ್ ಮಾಡಿದ್ದರು. ಆದರೆ, ಸರಿಯಾದ ಸಮಯ, ಅವಕಾಶ ಸಿಗದೆ ಅವತ್ತು ಹತ್ಯೆಯ ಪ್ಲಾನ್ ಪ್ಲಾಪ್ ಆಗಿತ್ತು. ಮರು ದಿನ ಅಂದ್ರೆ ಸೆಪ್ಟೆಂಬರ್ 5ರಂದು ಸಮಯ ಸಾಧಿಸಿ ಗೌರಿಯವರನ್ನ ಮುಗಿಸಿಯೇ ಬಿಟ್ಟಿದ್ದರು.

https://www.youtube.com/watch?v=ASRV3IF-5Cg

https://www.youtube.com/watch?v=Ov8Gc1Ih8tw

 

Share This Article
Leave a Comment

Leave a Reply

Your email address will not be published. Required fields are marked *