ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಹಿಂದೂಗಳಿಗೆ ಉಗ್ರ ಪಟ್ಟ: ಕ್ಷಮೆ ಕೇಳಿದ ಅಮೆರಿಕಾ ಟಿವಿ ಮಾಧ್ಯಮ!

Public TV
1 Min Read

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಎಬಿಸಿ ಟಿವಿ ಮಾಧ್ಯಮ ಸಂಸ್ಥೆಯು ಕ್ಷಮೆಯಾಚಿಸಿದೆ.

ಅಮೆರಿಕ ಎಬಿಸಿ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕ್ವಾಂಟಿಕೋದಲ್ಲಿ ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರವರು ಅಭಿನಯಿಸಿದ್ದರು. ಈ ಧಾರಾವಾಹಿಯಲ್ಲಿ ನಟಿ ಎಫ್‍ಬಿಐನ ಏಜೆಂಟ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಕಳೆದ ವಾರ ಬಿಡುಗಡೆಗೊಂಡ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರರೆಂದು ಬಿಂಬಿಸಲಾಗಿತ್ತು. ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಟ್ವಿಟ್ಟರ್ ನಲ್ಲಿ ಭಾರೀ ಟೀಕೆಗಳು ಕೇಳಿಬಂದಿದ್ದವು. ಹಣಕ್ಕೋಸ್ಕರ ಭಾರತೀಯರ ವಿರುದ್ಧ ಎಂತಹುದೇ ಪಾತ್ರಗಳಲ್ಲಿ ನಟಿಸುವ ನಿಮಗೆ ನಾಚಿಕೆಯಾಗಬೇಕು ಎಂದು ಆರೋಪಿಸಿ, ಕೂಡಲೇ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಸ್ಥೆಯು “ಸಂಚಿಕೆಯಲ್ಲಿ ಬರುವ ಸನ್ನಿವೇಶಕ್ಕೂ ನಟಿ ಪ್ರಿಯಾಂಕ ಚೋಪ್ರಾಗೂ ಯಾವುದೇ ಸಂಬಂಧವಿಲ್ಲ, ಕೇವಲ ಅವರು ಪಾತ್ರ ನಿರ್ವಹಿಸಿದ್ದಾರೆ.” ಅಲ್ಲದೇ ಧಾರಾವಾಹಿಯ ಯಾವುದೇ ತಯಾರಿಯಲ್ಲಿ ಅವರು ಭಾಗವಹಿಸಿಲ್ಲ. ಭಾರತೀಯರ ಭಾವನೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಾವು ಕ್ಷಮೆಯಾಚಿಸುತ್ತಿದ್ದೇವೆ ಎಂದು ಎಬಿಸಿ ಸಂಸ್ಥೆ ಹೇಳಿದೆ.

ಪ್ರಿಯಾಂಕ ಚೋಪ್ರಾರವರು ಈ ಸಂಚಿಕೆಯಲ್ಲಿ ಮೊದಲನೇ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕ್ವಾಂಟಿಕೋದ ಸಂಚಿಕೆಯ ಮೂರನೇ ಅವತರಣೆಯಾಗಿತ್ತು. ಇದಲ್ಲದೆ ಹಾಲಿವುಡ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಗಳು ಶೀಘ್ರವೇ ತೆರೆಕಾಣಲಿವೆ.

ಏನಿದೆ ಕ್ವಾಂಟಿಕೋ ಸಂಚಿಕೆಯಲ್ಲಿ?
ಪ್ರಿಯಾಂಕ ಚೋಪ್ರಾರವರು ಆಲೆಕ್ಸ್ ಪ್ಯಾರಿಸ್ ಎಂಬ ಎಫ್‍ಬಿಐ ಏಜೆಂಟ್ ಅಧಿಕಾರಿಯಾಗಿದ್ದು, ಮ್ಯಾನ್‍ಹಟನ್‍ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದ ಶೃಂಗ ಸಭೆ ವೇಳೆ ಪಾಕಿಸ್ತಾನದಲ್ಲಿ ಪರಮಾಣು ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದ ಶಂಕಿತ ಆರೋಪಿಯನ್ನು ಬಂಧಿಸಿರುತ್ತಾಳೆ. ಇವನು ರುದ್ರಾಕ್ಷಿ ಧರಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಂದೂ ಉಗ್ರಗಾಮಿ ಎಂಬಂತೆ ಸಂಚಿಕೆಯಲ್ಲಿ ಬಿಂಬಿಸಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *