ಸಿಎಂ ಜನತಾ ದರ್ಶನಕ್ಕೆ ತಂಡ ರಚನೆ – ವ್ಯಕ್ತಿಗೆ ಸ್ಥಳದಲ್ಲೇ ಉದ್ಯೋಗ ಕೊಡಿಸಿದ ಎಚ್‍ಡಿಕೆ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಜನತಾ ದರ್ಶನಕ್ಕಾಗಿ ತಂಡ ರಚಿಸಿದ್ದಾರೆ. ಇನ್ನು ಮುಂದೆ ಈ ತಂಡ ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲಿದೆ.

ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣ ಆವರಣದಲ್ಲಿ ಜನತಾ ದರ್ಶನದ ತಂಡ ರಚಿಸಿದ್ದು, ಸಮಸ್ಯೆ ಹೇಳಿಕೊಂಡು ಬರೋರ ಮಾಹಿತಿ ಪಡೆಯೋದು ಈ ತಂಡದ ಕೆಲಸವಾಗಿದೆ. ಸಿಎಂ ಜನತಾ ದರ್ಶನಕ್ಕೂ ಮುನ್ನ ಸಮಸ್ಯೆ ಏನು? ಯಾವ ಊರು? ಇನ್ನಿತರ ಮಾಹಿತಿ ಕಲೆ ಹಾಕಲಿದ್ದಾರೆ. ನಾಲ್ಕು ಸದಸ್ಯರ ಈ ತಂಡ ಗೃಹಕಚೇರಿ ಕೃಷ್ಣಾದಲ್ಲಿ ಕಾರ್ಯನಿರ್ವಹನಿಸಲಿದ್ದು, ಮಾಹಿತಿ ಪಡೆದು ಕಂಪ್ಯೂಟರ್ ನಲ್ಲಿ ದಾಖಲಿಸಿ, ಜನತಾ ದರ್ಶನ ನಂತರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಿದೆ.

ಜನತಾ ದರ್ಶನದ ವೇಳೆ ಶಿವಮೊಗ್ಗ ಜಿಲ್ಲೆಯ ಸೊರಬದ ವಿಕಲಚೇತನ ಮಾಲತೇಶ್ ಸಹಾಯ ಕೇಳಿ ಬಂದಿದ್ದರು. ಮಾಲತೇಶ್ ಎಂಬಿಎ ಓದುತ್ತಿದ್ದು, ಬಲಗಾಲು ಕಳೆದುಕೊಂಡಿದ್ದಾರೆ. ಇದನ್ನು ಆಲಿಸಿದ ಸಿಎಂ ವ್ಯಕ್ತಿಗೆ ಸ್ಥಳದಲ್ಲೇ ಅವರ ಕಚೇರಿಯಲ್ಲೇ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

ಕೊರಟಗೆರೆ ಸಮೀಪದ ಕೋಳಾಲದಿಂದ ಆಗಮಿಸಿದ್ದ ರಮೇಶ್ ಮತ್ತು ಪ್ರೇಮಾ ದಂಪತಿ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದಿದ್ದಾರೆ. ತಮ್ಮ ಎರಡು ಚಿಕ್ಕ ಮಕ್ಕಳಿಗೆ ಬೋನ್ ಮ್ಯಾರೋ ಆರೋಗ್ಯ ಸಮಸ್ಯೆ ಇದ್ದು, ಒಂದು ಮಗುವಿಗೆ 32 ಲಕ್ಷ ರೂ. ವೆಚ್ಚ ವಾಗುತ್ತದೆ. ಆದ್ದರಿಂದ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ 10 ತಿಂಗಳ ಮಗು ಲಿಖಿತ್ ಚಿಕಿತ್ಸೆಗೆ ಸೂಚನೆ ನೀಡಿದ್ದು, ಕುಮಾರಸ್ವಾಮಿ ಇಂದಿರಾಗಾಂಧಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ.

ಇನ್ನು ಹುಟ್ಟಿದ ಹಬ್ಬದ ದಿನದಂದು ಮುಖ್ಯಮಂತ್ರಿ ಎಚ್‍ಡಿಕೆಯನ್ನು ಅಪ್ಪಿಕೊಳ್ಳುವ ಬಯಕೆಯನ್ನು ತಿಂಡ್ಲು ನಿವಾಸಿ ಬಾಲಕ ಯಶವಂತ್ ವ್ಯಕ್ತಪಡಿಸಿದ್ದನು. ನನ್ನ ತಾಯಿಗೆ ಕಣ್ಣಿಲ್ಲ, ಜೀವನ ಕಷ್ಟವಾಗಿದೆ ಅಂತ ಸಿಎಂಗೆ ಮನವಿ ಮಾಡಿದ್ದಾನೆ. ಕುಮಾರಸ್ವಾಮಿ ಅವರು ಬಾಲಕನ ಕೋರಿಕೆ ಮನ್ನಿಸಿ ಹಣಕಾಸು ನೆರವಿನ ಭರವಸೆ ನೀಡಿದ್ದಾರೆ. ಜೊತೆಗೆ ಬಾಲಕನ್ನು ತಬ್ಬಿಕೊಂಡು ಆತನ ಬಯಕೆಯನ್ನು ಈಡೇರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *