ಮುಂಬೈ: 31 ವರ್ಷದ ನವವಿವಾಹಿತ ಶನಿವಾರ ವಾಯ್ ನ ಪಸರಾನಿ ಘಾಟ್ ನಲ್ಲಿ ದರೋಡೆ ಉದ್ದೇಶದಿಂದ ಕೊಲೆಗೀಡಾಗಿದ್ದು, ತನಿಖೆ ನಂತರ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಆನಂದ್ ಕಾಂಬ್ಳೆ ಪತ್ನಿಯಿಂದ ಕೊಲೆಯಾದ ದುರ್ದೈವಿ. ಮೃತ ಕಾಂಬ್ಳೆ ಆರೋಪಿ ಪತ್ನಿ ದೀಕ್ಷಾ ಓವಲ್ ಳನ್ನು ಮೇ 20 ರಂದು ಬಾನರ್ ನಲ್ಲಿ ಮದುವೆಯಾಗಿದ್ದನು. ಈ ಮದುವೆ ಎರಡು ಕುಟುಂಬಗಳು ಒಪ್ಪಿಗೆ ನೀಡಿತ್ತು.
ಕೊಲೆ ಮಾಡಿದ್ದು ಹೇಗೆ?
ಹೊಸದಾಗಿ ಮದುವೆಯಾದ ದಂಪತಿಗಳು ಶನಿವಾರ ಮಹಾಬಲೇಶ್ವರಕ್ಕೆ ಬೈಕಿನಲ್ಲಿ ತೆರಳಿದ್ದರು. ಆನಂದ್ ಅವರ ಸ್ನೇಹಿತ ರಾಜೇಂದ್ರ ಬೊಬಡೆ ಮತ್ತು ಅವರ ಪತ್ನಿ ಕಲ್ಯಾಣಿ ಸಹ ಜೊತೆ ಹೋಗಿದ್ದರು. ಪಸರಾನಿ ಘಾಟ್ ಗೆ ಬಳಿ ಹೋಗುತ್ತಿದ್ದಂತೆ ದೀಕ್ಷಾ ಆರೋಗ್ಯ ಸಮಸ್ಯೆಯಿಂದ ಬೈಕ್ ನಿಲ್ಲಿಸುವಂತೆ ಹೇಳಿದ್ದಾಳೆ. ಬಳಿಕ ಇಬ್ಬರು ತಮ್ಮ ತಮ್ಮ ಬೈಕ್ ಗಳನ್ನು ಸ್ಥಳದಲ್ಲೇ ನಿಲ್ಲಿಸಿದ್ದಾರೆ.
ಇದೇ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಆನಂದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದ ಪರಿಣಾಮ ಆನಂದ್ ಕುಸಿದು ಬಿದ್ದಿದ್ದಾರೆ. ನಂತರ ಈ ಘಟನೆಯನ್ನು ವೀಕ್ಷಿಸಿದ ಮೊತ್ತೊಂದು ದಂಪತಿ ಪಂಚಗಣಿ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಬಂದು ಆನಂದನನ್ನು ವಾಯ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸತಾರಾಕ್ಕೆ ರವಾನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಆನಂದ್ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮಹಾಬಲೇಶ್ವರದಲ್ಲಿ ಪ್ರವಾಸಿಗರಲ್ಲಿ ಭಯ ಉಂಟುಮಾಡಿತ್ತು.
ಸಿಕ್ಕಿ ಬಿದ್ದಿದ್ದು ಹೇಗೆ?
ಈ ಬಗ್ಗೆ ಸ್ಥಳೀಯ ಅಪರಾಧ ಶಾಖೆ ತನಿಖೆಯನ್ನು ಆರಂಭಿಸಿದ್ದು, ಪುಣೆಗೆ ಪೊಲೀಸ್ ತಂಡಗಳನ್ನು ಕಳುಹಿಸಿದ್ದಾರೆ. ತನಿಖೆಯಲ್ಲಿ ಈ ಕೇಸಿನಲ್ಲಿ ಮೃತನ ಪತ್ನಿ ದೀಕ್ಷಾ ಪ್ರಿಯಕರ ನಿಖಿಲ್ ಮಾಲೇಕರ ಕೈವಾಡ ಇದೆ ಎಂದು ಶಂಕಿಸಿ ನಿಗ್ಡಿಯಲ್ಲಿ ಆತನನ್ನು ಬಂಧಿಸಿದ್ದಾರೆ. ದೀಕ್ಷಾ ಮತ್ತು ನಿಖಿಲ್ ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಇಬ್ಬರು ನಡುವೆ ಸಂಬಂಧ ಇತ್ತು. ಆನಂದ್ ಜೊತೆ ದೀಕ್ಷಾ ಮದುವೆಯನ್ನು ಪೋಷಕರು ಮಾಡಿದ್ದಾರೆ. ಆದರೆ ಈ ಮದುವೆ ದೀಕ್ಷಾಗೆ ಇಷ್ಟವಿರಲ್ಲಿ. ಈ ಬಗ್ಗೆ ದೀಕ್ಷಾ ನಿಖಿಲ್ ಗೆ ಕರೆ ಮಾಡಿ ಹೇಳಿದ್ದಾಳೆ. ಬಳಿಕ ಇಬ್ಬರು ಸೇರಿ ಪ್ಲ್ಯಾನ್ ಮಾಡಿ ಆನಂದ್ ನನ್ನು ಕೊಲೆ ಮಾಡಿದ್ದಾರೆ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ವಾಯ್ ಪೊಲೀಸರು ಪತ್ನಿ, ಪ್ರಿಯಕರ ನಿಖಿಲ್ ಮತ್ತು ಹಲ್ಲೆಗೆ ಸಹಾಯ ಮಾಡಿದ್ದ ಇಬ್ಬರು ಆರೋಪಿಗಳನ್ನು ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ದೀಕ್ಷಾ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ. ನಮ್ಮ ತಂಡಗಳು ಇತರ ಆರೋಪಿಗಳ ಹುಡುಕಾಟದಲ್ಲಿವೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾಕರ್ ಘನವಾತ್ ಹೇಳಿದ್ಧಾರೆ.
ದೀಕ್ಷಾ ನನ್ನ ಸಹೋದರನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ ಎಂದು ನಾವು ಭಾವಿಸಿರಲಿಲ್ಲ. ನಾವು ಅವಳು ಮತ್ತು ಆಕೆಯ ಕುಟುಂಬದಿಂದ ವಂಚಿಸಲ್ಪಟ್ಟಿದ್ದೇವೆ. ಎಲ್ಲ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಮೃತ ಆನಂದ್ ಸೋದರ ಸಂತೋಷ್ ಕಾಂಬ್ಳೆ ನೋವಿನಿಂದ ಹೇಳಿದ್ದಾರೆ.