ರಾಜ್ಯದಲ್ಲಿ ಮುಂದುವರೆದ ಮಳೆಯಬ್ಬರ – ಧರೆಗುರುಳಿದ ಮರಗಳು, ಕಾರು ಜಖಂ, ಮನೆಗೆ ನುಗ್ಗಿದ ನೀರು

Public TV
2 Min Read

ಬೆಂಗಳೂರು: ಮುಂಗಾರು ಮಳೆ ನಿಗದಿಗೂ ಮುಂಚೆ ಸಿಲಿಕಾನ್ ಸಿಟಿಯಲ್ಲಿ ವರುಣನ ದರ್ಶನ ಜೋರಾಗಿದೆ. ಶನಿವಾರ ಮಧ್ಯಾಹ್ನ ಸುರಿದ ಮಳೆಗೆ 15 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿದ್ದು, ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಾಕಷ್ಟು ಜನರು ಹೈರಾಣಾಗಿ ತೊಂದರೆ ಅನುಭವಿಸಿದ್ದರು. ಇದರ ಮುಂದುವರೆದ ಭಾಗವಾಗಿ, ನಿಗದಿತ ಮುಂಗಾರು ಮಳೆಗೆ ಮುಂಚೆ ಶನಿವಾರ ಮಧ್ಯಾಹ್ನದಿಂದಲೇ ವರುಣನ ಆರ್ಭಟ ಜೋರಾಗಿತ್ತು. ನಗರದಲ್ಲಿ ಸುರಿದ ಮಳೆಗೆ 16 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಅಷ್ಟೇ ಅಲ್ಲದೇ ವಿವಿ ಪುರಂನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜಯನಗರ ಮತ್ತು ಬನಶಂಕರಿಯಲ್ಲಿ ಎರಡು ಕಾರಿನ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಕಾರುಗಳು ಜಖಂ ಆಗಿವೆ.

ವರ್ತೂರು ಕೆರೆ ಕೋಡಿ ಒಡೆದು ರಸ್ತೆಯೇ ಕೆರೆ ಆಯ್ತು. ಶಾಂತಿನಗರ, ಓಕಳಿಪುರಂನ ಅಂಡರ್ ಪಾಸ್ ಗಳಲ್ಲಿ ಮಳೆಗೆ ನೀರು ನಿಲ್ಲಲೇಬೇಕು. ಆದ್ರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ವರ್ಷ ಆಗಿದ್ದ ಅನಾಹುತಗಳಿಂದ ಪಾಠ ಕಲಿತಂತಿಲ್ಲ. ಚರಂಡಿ, ರಾಜಕಾಲುವೆ ರಿಪೇರಿ ಕಾಮಗಾರಿ ನಡೆಸಿಲ್ಲ. ತಡೆಗೋಡೆ ನಿರ್ಮಿಸಿಲ್ಲ. ಮಳೆಗೆ ಮುಳುಗಿ ಹೋಗಿದ್ದ ಕೋರಮಂಗಲದಲ್ಲಿ ಏನೂ ಕೆಲ್ಸ ನಡೆದಿಲ್ಲ. ಆ ಕ್ಷಣಕ್ಕೆ ಸಮಾಧಾನಕಾರ ಹೇಳಿಕೆ ಕೊಡುವುದಕ್ಕಷ್ಟೇ ಮೇಯರ್ ಸಂಪತ್‍ರಾಜ್, ಮೂರು ಪಕ್ಷಗಳ ಕಾರ್ಪೋರೇಟರ್ ಗಳು, ಅಧಿಕಾರಿಗಳು ಸೀಮಿತರಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇನ್ನು ರಾಜ್ಯದ ವಿವಿಧೆಡೆಗಳಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ಚಿಕ್ಕಮಗಳೂರು, ಎನ್‍ ಆರ್ ಪುರದಲ್ಲಿ ವರ್ಷಧಾರೆ ಆಗಿದೆ. ಮಾಗುಂಡಿಯಲ್ಲಿ ಬಾಳೆಹೊನ್ನೂರು-ಕಳಸಕ್ಕೆ ಸಂಪರ್ಕ ಕಲ್ಪಿಸೋ ಸೇತುವೆ ಮುಳುಗಿ ಹೋಗಿತ್ತು. ಗದಗ ನಗರದ ಗಂಗಿಮಡಿ, ಹುಡ್ಕೊ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ.

ಧಾರವಾಡದ ಸೋಮೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿತ್ತಲ್ಲದೇ, ಹುಬ್ಬಳ್ಳಿ-ಧಾರವಾಡ ರಸ್ತೆ ನೀರಲ್ಲಿ ಮುಳುಗಿತ್ತು. ಹಾವೇರಿ ಪೇಟೆ ಕಂಠಿಗಲ್ಲಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೂ ನೀರು ನುಗ್ಗಿತ್ತು. ಇನ್ನು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ನಾಯಕನಹಳ್ಳಿಯಲ್ಲಿ ಕೆರೆ ಏರಿ ಒಡೆದು ಭತ್ತ, ರಾಗಿ ಹೊಲಗಳು ಮುಳುಗಿ ಹೋಗಿದ್ದು, ಮೈಸೂರಿನ ಚಾಮರಾಜ ಮುಖ್ಯ ರಸ್ತೆ, ಟೌನ್‍ ಹಾಲ್, ಅರಸು ರಸ್ತೆಯಲ್ಲೂ ಪ್ರವಾಹ ಉಂಟಾಯಿತು. ಅಂಗಡಿ, ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕುಗಳು ತೇಲಿದ್ದವು.

Share This Article
Leave a Comment

Leave a Reply

Your email address will not be published. Required fields are marked *