ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

Public TV
2 Min Read

ಚೆನ್ನೈ: ಪಠ್ಯ ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳಾಗಲಿ, ತುಂಬಿದ ಕಂಟೈನರ್ ಗಳಾಗಲಿ ಅಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈ ಕೋರ್ಟ್ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದೆ.

ಮಕ್ಕಳ ಕೈ ಚೀಲದ ಹೊರೆಯನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡದಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳ ಆದೇಶಗಳನ್ನು ಉಲ್ಲೇಖ ಮಾಡುತ್ತಾ ನ್ಯಾಯಮೂರ್ತಿ ಕಿರುಬಾಕರನ್ ಕೈ ಚೀಲದ ತೂಕ ಮಕ್ಕಳ ತೂಕದ 10% ಮೀರಿರಬಾರದು. ಈ ಸಂಬಂಧ “ಮಕ್ಕಳ ಶಾಲಾ ಬ್ಯಾಗ್ ನೀತಿ” ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

ವಕೀಲ ಎಂ ಪುರುಷೋತ್ತಮನ್ ಅವರು ಎನ್‍ಸಿಇಆರ್ ಟಿ ಸಿದ್ಧಪಡಿಸಿದ ಪಠ್ಯ ಮತ್ತು ಎನ್‍ಸಿಇಆರ್ ಟಿ ಮುದ್ರಿಸಿದ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ಸಿಬಿಎಸ್‍ಇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.

ಎನ್‍ಸಿಇಆರ್ ಟಿ ಪಠ್ಯ ಕ್ರಮ ಮತ್ತು ಬುಕ್ ಗಳನ್ನು ಕಡ್ಡಾಯ ಗೊಳಿಸುವಂತೆ ಕೇಂದ್ರಿಯ ಶಿಕ್ಷಣ ಮಂಡಳಿ (ಸಿಬಿಎಸ್‍ಇ) ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಕೋರ್ಟ್ ಸೂಚಿಸಿದೆ.

1 ಮತ್ತು 2 ನೇ ತರಗತಿಗೆ ಭಾಷೆ ಮತ್ತು ಗಣಿತ ವಿಷಯಗಳು ಮಾತ್ರ ಇರಬೇಕು. ತರಗತಿ 3 ರಿಂದ 5 ನೇ ತರಗತಿ ವರೆಗೆ ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳನ್ನು ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ ಬೋಧಿಸಬೇಕು. ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ವೈದ್ಯರು ಹೇಳುವಂತೆ 5 ರಿಂದ 6 ವರ್ಷದ ಮಕ್ಕಳಿಗೆ ಕನಿಷ್ಠ 11 ಗಂಟೆ ನಿದ್ದೆ ಬೇಕು. ಬೆಳಗ್ಗೆ ಶಾಲೆಗೆ ಮುಂಚೆ ಹೋಗಿದ್ದರೆ ಬೇಗ ಮಲಗಬೇಕು. ಹೋಮ್ ವರ್ಕ್ ಮಕ್ಕಳ ನಿದ್ದೆಯ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಆದೇಶದಲ್ಲಿ ವೈದ್ಯಕೀಯ ತಜ್ಞರ ಹೇಳಿಕೆಗಳನ್ನು ಜಡ್ಜ್ ಉಲ್ಲೇಖಿಸಿದರು.

1 ನೇ ತರಗತಿ ಪಠ್ಯ ಕ್ರಮದಲ್ಲಿ ವ್ಯಾಕರಣ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳು ಇರುವುದು ಆಶ್ಚರ್ಯ ಮತ್ತು ಅತಂಕ ತರಿಸುವಂತದ್ದು. 5 ವರ್ಷದ ಮಗು ಹೇಗೆ ಈ ವಿಷಯಗಳನ್ನು ಗ್ರಹಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‍ಇ ಶಾಲೆಗಳು ಅಪ್ರಸ್ತುತ ವಿಷಯಗಳನ್ನು ಬೋಧಿಸಿ ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಅಭಿಪ್ರಾಯಪಟ್ಟು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದರು.

 

Share This Article
Leave a Comment

Leave a Reply

Your email address will not be published. Required fields are marked *