ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

Public TV
1 Min Read

ಉಡುಪಿ: ದನದ ವ್ಯಾಪಾರಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಮೂಲದ ಜೋಕಟ್ಟೆ ನಿವಾಸಿಯಾಗಿರುವ ಹುಸೇನಬ್ಬ ಮೃತ ವ್ಯಕ್ತಿ. ಕಳೆದ 35 ವರ್ಷಗಳಿಂದ ಹಸುವಿನ ವ್ಯಾಪಾರ ಮಾಡುತ್ತಿದ್ದ ಹುಸೇನಬ್ಬ ಕಳೆದ ರಾತ್ರಿ ಉಡುಪಿಯ ಪೆರ್ಡೂರು ಸಮೀಪ ಬರುತ್ತಿರುವಾಗ ಪೊಲೀಸರು ವಾಹನವನ್ನು ಅಡ್ಡಗಟ್ಟಿದ್ದರು. ಹಸು ಸಾಗಾಟದ ವಾಹನದಲ್ಲಿದ್ದ ನಾಲ್ಕೈದು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಪೊಲೀಸರು ವಾಹವನ್ನು ಕಳೆದ ರಾತ್ರಿಯೇ ವಶ ಪಡಿಸಿಕೊಂಡಿದ್ದಾರೆ.

ಪೊಲೀಸರಿಂದ ಕಳೆದ ರಾತ್ರಿ ತಪ್ಪಿಸಿಕೊಂಡು ಓಡಿದ್ದ ಹುಸೇನಬ್ಬರ ಮೃತದೇಹ ಬೆಳಗ್ಗೆ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಹುಸೇನಬ್ಬ ಅವರ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ರಾತ್ರಿ ಪೊಲೀಸರು ದಾಳಿ ನಡೆಸಿದ ವೇಳೆ ಅವರೊಂದಿಗೆ ಇತರೇ ಸ್ಥಳಿಯ ಸಂಘಟನೆಗಳ ಕಾರ್ಯಕರ್ತರಿದ್ದರು ಎಂಬ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಸಿದ್ದಾರೆ. ಈ ಹಿಂದೆ ಕೂಡಾ ಎರಡು ಮೂರು ಬಾರಿ ಹುಸೇನಬ್ಬ ಮೇಲೆ ಇದೇ ರೀತಿಯ ದಾಳಿ ನಡೆಲಾಗಿತ್ತು ಎಂದು ಆರೋಪಿಸಿರುವ ಅವರು ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಹೊಡೆದು ಕೊಲೆಗೈದಿರಬಹುದು ಎಂದು ಕುಟುಂಬಸ್ಥರು ಹಿರಿಯಡ್ಕ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲು ಮಾಡಿದ್ದಾರೆ.

ಸದ್ಯ ಹುಸೇನಬ್ಬ ಅವರ ಮೃತದೇಹವನ್ನು ಮಣಿಪಾಲ ಶವಾಗಾರಕ್ಕೆ ರವಾನಿಸಲಾಗಿದ್ದು, ಹೃದಯಾಘಾತದಿಂದ ಸತ್ತಿರಬಹುದೆಂಬ ಶಂಕೆಯೂ ಇದೆ. ಮೃತರು ಹೃದಯದ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತದೇಹದ ಶವಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ಖಚಿತ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಮಾಧ್ಯಮಗಳ ಜೊತೆ ಮಾತನಾಡಿ, ಘಟನೆಯ ಕುರಿತು ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡುತ್ತೇವೆ. ಹುಸೇನಬ್ಬ ಕುಟುಂಬಸ್ಥರು ಕೆಲ ಸಂಘಟನೆಯ ಹೆಸರು ಹೇಳಿದ್ದಾರೆ. ಆ ನಿಟ್ಟಿನಲ್ಲೂ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *