ಸ್ಫೋಟಕ ಬ್ಯಾಟಿಂಗ್ ಹಿಂದಿರುವ ರಹಸ್ಯವನ್ನು ರಿವೀಲ್ ಮಾಡಿದ್ರು ರಾಯುಡು!

Public TV
1 Min Read

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಚಾಂಪಿಯನ್ ಆಗಲು ಮುಖ್ಯ ಕಾರಣ ಆ ತಂಡಕ್ಕಿದ್ದ ಬ್ಯಾಟಿಂಗ್ ಬಲ. ಸ್ಟಾರ್ ವಿದೇಶಿ ಆಟಗಾರರ ಜೊತೆ ಸ್ಥಳೀಯ ಆಟಗಾರರು ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸಿದ್ದರು. ಪವರ್ ಪ್ಲೇನಲ್ಲಿ ತಂಡ ಹೆಚ್ಚಿನ ಮೊತ್ತ ದಾಖಲಿಸಲು ನೆರವಾಗಿದ್ದು ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್.

16 ಪಂದ್ಯಗಳಿಂದ 43ರ ಸರಾಸರಿಯಲ್ಲಿ 602 ರನ್‍ಗಳಿಸಿದ್ದ ರಾಯುಡು, ಟೂರ್ನಿಯಲ್ಲಿ ಅತೀಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದರು. ಆದರೆ ತನ್ನ ಸ್ಫೋಟಕ ಬ್ಯಾಟಿಂಗ್‍ನ ಹಿಂದಿನ ರಹಸ್ಯವನ್ನು ಸ್ವತಃ ಅಂಬಟಿ ರಾಯುಡು ಇದೀಗ ಬಹಿರಂಗಗೊಳಿಸಿದ್ದಾರೆ. ತಾನು ಐಪಿಎಲ್‍ನಲ್ಲಿ ಶ್ರೇಷ್ಟ ಮಟ್ಟದ ಪ್ರದರ್ಶನ ನೀಡುವಲ್ಲಿ ನೆರವಾಗಿದ್ದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ಎಂದು ರಾಯುಡು ಹೇಳಿದ್ದಾರೆ.

ಹರ್ಭಜನ್ ನಡೆಸಿಕೊಡುವ ‘ಕ್ವಿಕ್‍ಹೀಲ್ ಭಜ್ಜಿ ಬ್ಲಾಸ್ಟ್ ಶೋ’ ಕಾರ್ಯಕ್ರಮದಲ್ಲಿ ಮನಸ್ಸು ಬಿಚ್ಚಿ ಮಾತನಾಡಿರುವ ರಾಯುಡು, ಪ್ರತೀ ವರ್ಷವೂ ನಾನು ಕೊಹ್ಲಿಯಿಂದ ಬ್ಯಾಟ್ ಕೇಳಿ ಪಡೆಯುತ್ತಿದ್ದೇನೆ. ಈ ಬ್ಯಾಟ್‍ನಲ್ಲಿ ಆತ್ಮವಿಶ್ವಾಸದಿಂದ ದೊಡ್ಡ ಹೊಡೆತಗಳನ್ನು ಬಾರಿಸುತ್ತೇನೆ ಎಂದು ರಾಯುಡು ಹೇಳಿದ್ದಾರೆ.

ಕಳೆದ 8 ಆವೃತಿಗಳಲ್ಲಿ ಮುಂಬೈ ಪರ ಬ್ಯಾಟ್ ಬೀಸಿದ್ದ 32 ವರ್ಷದ ರಾಯುಡುರನ್ನು ಈ ಬಾರಿ ಚೆನ್ನೈ, 2.2 ಕೋಟಿ ರೂ. ಕೊಟ್ಟು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶ ಪಡೆದಿದ್ದ ರಾಯುಡು, ತಂಡದ ಪರ ಟಾಪ್ ಸ್ಕೋರರ್ ಆಗಿ ಮಿಂಚಿದ್ದರು. ಒಟ್ಟು 53 ಬೌಂಡರಿ ಹಾಗೂ 34 ಸಿಕ್ಸರ್ ಸಿಡಿಸಿದ್ದ ರಾಯುಡು, ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. 2010ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಯುಡು ಒಟ್ಟು 2416 ರನ್‍ಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *