ನವದೆಹಲಿ: ತಿನ್ನಲು ಮೋಮೋಸ್ ಕೇಳಿದ್ದಕ್ಕೆ ಕೋಪಗೊಂಡ ತಂದೆ ತನ್ನ 6 ವರ್ಷದ ಮಗನನ್ನು ಕಾಲುವೆಗೆ ತಳ್ಳಿ ಕೊಂದ ಅಮಾನವೀಯ ಘಟನೆ ಆಗ್ನೇಯ ದೆಹಲಿಯ ಜೈತ್‍ಪುರ್ ಎಂಬ ಪ್ರದೇಶದಲ್ಲಿ ಭಾನುವಾರ ನಡೆದಿದೆ.
6 ವರ್ಷದ ಅಯಾನ್ ತಂದೆಯಿಂದಲೇ ಕೊಲೆಯಾದ ಮಗ. 31 ವರ್ಷದ ಸಂಜಯ್ ಆಲ್ವಿ ತನ್ನ ಮಗನೊಂದಿಗೆ ಖಾದರ್‍ಪುಲಿಗೆ ತೆರಳಿದ್ದನು. ಅಯಾನ್ ತಿನ್ನಲು ಮೋಮೋಸ್ ಕೊಡಿಸುವುವಂತೆ ಹಠ ಹಿಡಿದಿದ್ದಾರೆ. ಆದ್ರೆ ಕಂಠಪೂರ್ತಿ ಕುಡಿದಿದ್ದ ಆಲ್ವಿ ತಾಳ್ಮೆ ಕಳೆದುಕೊಂಡು ಸಿಟ್ಟಿನಿಂದ ಮಗನನ್ನು ಕಾಲುವೆಗೆ ತಳ್ಳಿ, ಕೊಲೆ ಮಾಡಿದ್ದಾನೆ.
ಮದನಪುರ ಜಿಲ್ಲೆಯ ಭಂಗರ್ ಕಾಲೋನಿಯ ನಿವಾಸಿಯಾಗಿರುವ ಆಲ್ವಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಮಗನನ್ನು ಕಾಲುವೆಗೆ ತಳ್ಳಿದ ನಂತರ ಕಾಲುವೆಯಲ್ಲಿ ಅಯಾನ್ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಜನರಿಗೆ ತೋರಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಜ್ಜಿಯೊಂದಿಗೆ ವಾಸವಾಗಿರುವ ಆರೋಪಿ 2004ರಲ್ಲಿ ಆಸ್ಮಾ ಎಂಬವರನ್ನು ಮದುವೆಯಾಗಿದ್ದು, ಮೂವರು ಮಕ್ಕಳಲ್ಲಿ ಅಯಾನ್ ಕೂಡ ಒಬ್ಬ. ಆರೋಪಿಯು ತಾನು ಕಂಠಪೂರ್ತಿ ಕುಡಿದಿದ್ದ ಸಮಯದಲ್ಲಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಭಾನುವಾರ ಮಧ್ಯಾಹ್ನ ಕಾಲುವೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ ಎಂದು ಆಗ್ನೇಯ ದೆಹಲಿಯ ಉಪ ಪೊಲೀಸ್ ಆಯುಕ್ತರಾದ ಚಿನ್ಮೊಯ್ ಬಿಸ್ವಾಲ್ ಹೇಳಿದ್ದಾರೆ.
ಆಲ್ವಿ ಕುಡಿತದ ಚಟಕ್ಕೆ ಬಿದ್ದು ನಿತ್ಯ ತನ್ನ ಹೆಂಡತಿಯೊಡನೆ ಜಗಳವಾಡುತ್ತಿದ್ದನು. 2013ರಲ್ಲಿ ಆಸ್ಮಾ, ಪತಿಯನ್ನು ತೊರೆದು ತನ್ನ ಪೋಷಕರೊಂದಿಗೆ ಸೋನಿಪತ್ ನಗರದಲ್ಲಿ ವಾಸವಾಗಿದ್ದಾರೆ.