ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

Public TV
2 Min Read

ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕಪ್ ಅನ್ನು ಕುಮಾರಸ್ವಾಮಿ ಗೆದ್ದುಕೊಂಡರೂ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಹೊರ ಹೊಮ್ಮಿದ್ದಾರೆ.

ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

ಶನಿವಾರ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಮಧ್ಯಾಹ್ನ ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ಬೇಕಿದ್ರೆ ಬೆಟ್ ಕಟ್ತೀನಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ: ಡಿಕೆ ಶಿವಕುಮಾರ್

ಬಿಜೆಪಿ ಮ್ಯಾಜಿಕ್ ಸಂಖ್ಯೆಗೆ ತಲುಪುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಫಲಿತಾಂಶ ಬಂದ ದಿನವೇ ಖುದ್ದಾಗಿ ತೆರಳಿ ಮುಳುಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರ ಜೊತೆ ಮಾತನಾಡಿ ನಮ್ಮ ಸರ್ಕಾರಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು.

ರಾಜ್ಯಪಾಲರು ಬಿಎಸ್‍ವೈಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ 15 ದಿನ ಸಮಯ ನೀಡಿದ ಕೂಡಲೇ ಜೆಡಿಎಸ್ ಶಾಸಕರಿಗಿಂತ ಕಾಂಗ್ರೆಸ್ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಗೊತ್ತಾಯಿತು. ಹೀಗಾಗಿ ರಾಜ್ಯದ ಕೈ ಶಾಸಕರು ಕಮಲಕ್ಕೆ ಹೋಗದಂತೆ ತಡೆಯಲು ಡಿಕೆ ಶಿವಕುಮಾರ್ ಸಹೋದರರ ಹೆಗಲಿಗೆ ಹೈಕಮಾಂಡ್ ಜವಾಬ್ದಾರಿಯನ್ನು ಹಾಕಿತ್ತು.  ಬಹುಮತ ಸಾಬೀತು ಪಡಿಸುವ ದಿನ ಯಾರಾದರೂ ಅಡ್ಡ ಮತದಾನ ಮಾಡಬಹುದು ಎನ್ನುವ ಶಂಕೆ ಇತ್ತು. ಆದರೆ ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರು ಬಿಜೆಪಿಯ ತೆಕ್ಕೆಗೆ ಬೀಳಲೇ ಇಲ್ಲ. ಈ ಮೂಲಕ ಡಿಕೆಶಿ  ಹೈ ಕಮಾಂಡ್ ಗೆ ನೀಡಿದ ಮಾತನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾದರು.

ಈಗಲ್ ಟನ್ ರೆಸಾರ್ಟ್ ಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಾಗ ಕನಕಪುರದ ಕಾರ್ಯಕರ್ತರನ್ನು ಕರೆಸಿ ರೆಸಾರ್ಟ್ ಸುತ್ತ ಭದ್ರ ಕಾವಲು ಹಾಕಿಸಿದ್ದರು. ಈ ಹಿಂದೆ ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಕೈ ಶಾಸಕರನ್ನು ಇದೇ ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದು ಅಹ್ಮದ್ ಪಟೇಲ್ ಜಯಗಳಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆಶಿ ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *