5 ನಿಮಿಷದಲ್ಲಿ ಬಿಜೆಪಿ ಶಾಸಕಾಂಗ ಸಭೆ ಮುಕ್ತಾಯ- ಈ ಬಾರಿ ಕಪ್ ನಮ್ದೆ ಎಂದ ಪ್ರತಾಪ್ ಸಿಂಹ

Public TV
1 Min Read

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಬಿಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದು, ಬಿಜೆಪಿ ನಾಯಕರು 5 ನಿಮಿಷದಲ್ಲಿ ಶಾಸಕಾಂಗ ಸಭೆಯನ್ನು ಮುಗಿಸಿದ್ದಾರೆ.

ಇಂದು ಬೆಳಗ್ಗೆ ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿಯ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ಮುಧೋಳ ಶಾಸಕ ಗೋವಿಂದ ಕಾರಜೋಳ ಯಡಿಯೂರಪ್ಪನವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಸೂಚಿಸಿದರು. ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಕಾರಜೋಳ ಅವರು ಸೂಚನೆಯನ್ನು ಅನುಮೋದಿಸಿದರು.

ಸಭೆಯ ಬಳಿಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಈಶ್ವರಪ್ಪ, ಸದಾನಂದ ಗೌಡ, ಬಸವರಾಜ್ ಬೊಮ್ಮಯಿ, ಪಿ.ಸಿ ಮೋಹನ್, ಉದಾಸಿ, ಶೋಭಾ ಕರಂದ್ಲಾಜೆ ಮತ್ತಿತರ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್ ಶಂಕರ್, ಅರವಿಂದ್ ಲಿಂಬಾವಳಿ, ಸುರೇಶ್ ಅಂಗಡಿ, ಪುಟ್ಟಸ್ವಾಮಿ ಕೂಡ ಭೇಟಿ ನೀಡಿದ್ದರು. ಪ್ರಕಾಶ್ ಜಾವಡೇಕರ್, ಮುರುಳಿಧರ್ ರಾವ್ ಸಹ ರಾಜಭವನಕ್ಕೆ ಆಗಮಿಸಿದ್ದರು. ಸರ್ಕಾರ ರಚಿಸಲು ಅನುಮತಿ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡರು.

ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಹಾಗೂ ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡರು ರಾಜ್ಯಪಾಲರಲ್ಲಿ ಅನುಮತಿ ಕೇಳಿದರು.

ರಾಜಭವನದಿಂದ ಹೊರಬಂದ ಮೇಲೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆ ಪ್ರತಿಯನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಸಿಎಂ ಆಗಿ ಅಧಿಕಾರಿ ಸ್ವೀಕರಿಸಲು ಅವಕಾಶ ನೀಡುವಂತೆ ಕೋರಿದ್ದೇವೆ. ಅದಕ್ಕೆ ರಾಜ್ಯಪಾಲರು ಸಕಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಪಾಲರಿಂದ ಉತ್ತರ ಬಂದಮೇಲೆ ನಮ್ಮ ಬಹುಮತ ಸಾಬೀತು ಪಡಿಸುತ್ತೇವೆ. ಆರುವರೆ ಕೋಟಿ ಜನರ ಮುಂದೆ ನಮಗೆ ಬೆಂಬಲ ಕೊಟ್ಟಿರೋರು ಯಾರು ಅಂತಾ ಹೇಳುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ.

ಬಿಜೆಪಿಯವರು ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದ್ದಾರೆ ಎನ್ನುವ ಪ್ರತಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ್ ಈ ಬಾರಿ ಕಪ್ ನಮ್ದೇ, ಸರ್ಕಾರವೂ ನಮ್ದೇ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *