ಮೊದಲ ಬಾರಿಗೆ ಪ್ರಧಾನಿ ಆಗುವ ಆಸೆಯನ್ನು ಹೊರ ಹಾಕಿದ ರಾಹುಲ್ ಗಾಂಧಿ

Public TV
2 Min Read

ಬೆಂಗಳೂರು: ಮೊದಲ ಬಾರಿಗೆ ಪ್ರಧಾನಿಯಾಗುವ ಆಸೆಯನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊರ ಹಾಕಿದ್ದಾರೆ. ಸಂವೃದ್ಧ ಭಾರತ ಪ್ರತಿಷ್ಠಾನದಿಂದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಪ್ರಧಾನಿಯಾಗೋ ಬಯಕೆ ಬಿಚ್ಚಿಟ್ಟರು.

2019 ರಲ್ಲಿ ನೀವು ಪ್ರಧಾನಿ ಆಗ್ತೀರಾ ಅಂತ ಗಣ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿ ರಾಹುಲ್ ಗಾಂಧಿ, ವಿಪಕ್ಷಗಳೆಲ್ಲ ಮೋದಿ ವಿರುದ್ಧ ಒಂದಾಗಿವೆ. 2019 ರಲ್ಲಿ ಮೋದಿ ಅವರು ಪ್ರಧಾನಿ ಆಗೊಲ್ಲ ಎಂದು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ.

ಮೋದಿಗೆ ಪ್ರಬಲ ಸ್ಪರ್ಧೆ ನೀಡೋದು ಕಾಂಗ್ರೆಸ್ ಮಾತ್ರ. 2019 ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಒಂದಾಗಲಿದ್ದು, ಸಂಖ್ಯಾ ಆಧಾರದಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಪ್ರಧಾನಿ ಸ್ಥಾನ ಸಿಗುತ್ತದೆ. ಸಂಖ್ಯಾಬಲದ ಮೇಲೆ ನಾನು ಪ್ರಧಾನಿ ಆಗಬಹುದು. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮುಕ್ತ ರಾಷ್ಟ್ರವನ್ನಾಗಿ ಮಾಡುತ್ತೇವೆ ಅಂತ ಹೇಳಿದರು.

ಯುಪಿಯಲ್ಲಿ ಈ ಬಾರಿ ಬಿಜೆಪಿ 70 ಸ್ಥಾನ ಕಳೆದುಕೊಳ್ಳಲಿದೆ. ಒಂದು ವೇಳೆ ಮೈತ್ರಿ ಮಾಡಿಕೊಳ್ಳಲು ಹೋದರೆ ಮೋದಿಯನ್ನ ಪ್ರಧಾನಿಯಾಗಲು ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಬಿಡುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

ಸಂವಾದದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ರಾಹುಲ್, ಮೋದಿ ಅವರಿಗೆ 4 ಪ್ರಶ್ನೆಗಳನ್ನ ಕೇಳಿದರು. ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಯಾಕೆ ಘೋಷಣೆ ಮಾಡಿದ್ರಿ? ಜನರ 35 ಸಾವಿರ ಕೋಟಿ ಹಣ ಲೂಟಿ ಮಾಡಿದ ಜನಾರ್ದನ ರೆಡ್ಡಿಯ 8 ಜನ ಸಹೋದರರಿಗೆ ಯಾಕೆ ಸೀಟ್ ನೀಡಿದ್ರಿ? ಮೋದಿ ಅಧಿಕಾರಕ್ಕೆ ಬಂದ್ರೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂತ ಹೇಳಿದ್ರಿ. ಯಾಕೆ ಈವರೆಗೂ ಉದ್ಯೋಗ ಸೃಷ್ಟಿ ಮಾಡಿಲ್ಲ. ರಾಫೆಲ್ ಫೈಟರ್ ಜೆಟ್ ಗಳ ಕಂಟ್ರಾಕ್ಟ್ ಎಚ್‍ಎಎಲ್ ಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಯಾಕೆ ಒಂದೂ ರೂಪಾಯಿ ರೈತರ ಸಾಲ ಮನ್ನಾ ಮಾಡಿಲ್ಲ? ಈ ಬಗ್ಗೆ ನರೇಂದ್ರ ಮೋದಿ ಉತ್ತರ ನೀಡಬೇಕು ಅಂತ ಸವಾಲು ಹಾಕಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಶಾ ಒಬ್ಬ ಕೊಲೆ ಆರೋಪಿ. ಇದನ್ನ ದೇಶದ ಜನ ಮರೆಯಬಾರದು. ಅವರ ಹಿನ್ನೆಲೆ, ರಾಜಕೀಯ ನೋಡಬೇಕು. ಪ್ರಾಮಾಣಿಕತೆ, ಸಭ್ಯತೆ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

Share This Article
Leave a Comment

Leave a Reply

Your email address will not be published. Required fields are marked *