ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಬಾರಿಸಬಲ್ಲೆ ಎಂದ ಅಫ್ಘಾನ್ ಕ್ರಿಕೆಟಿಗ!

Public TV
1 Min Read

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿರಬಹುದು. ಆದರೆ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿಕೆಟ್ ಕೀಪರ್ – ಬ್ಯಾಟ್ಸ್‍ಮನ್ ಮೊಹಮ್ಮದ್ ಶಹಝಾದ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಟೆಸ್ಟ್ ಆಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಫ್ಘಾನಿಸ್ತಾನ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಇದಕ್ಕಾಗಿ ಭಾರತದಲ್ಲಿಯೇ ಅಭ್ಯಾಸ ನಡೆಸುತ್ತಿರುವ ಶಹಝಾದ್ ಫಿಟ್ನೆಸ್ ವಿಚಾರದಲ್ಲಿ ಮಾತ್ರ ಯಾವುದೇ ರಾಜಿಯಾಗುವುದಿಲ್ಲ ಎಂದಿದ್ದಾರೆ.

ಫಿಟ್ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ ಆದರೆ ಆಹಾರದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದಿರುವ 30 ವರ್ಷದ ಶಹಝಾದ್ 90 ಕೆಜಿ ದೇಹತೂಕ ಹೊಂದಿದ್ದಾರೆ. ತನ್ನ ದೇಹಗಾತ್ರದಿಂದಾಗಿ ಎಲ್ಲಡೆಯಿಂದ ಟೀಕೆ ಕೇಳಿ ಬರುತ್ತಿದ್ದರೂ ತಲೆಕೆಡಿಸಿಕೊಳ್ಳದ ಶೆಹಝಾದ್, ಫಿಟ್ನೆಸ್ ಕಾಯ್ದುಕೊಳ್ಳಲು ಕೊಹ್ಲಿ ಪಾಲಿಸುವ ಶೈಲಿಯನ್ನು ನನ್ನಿಂದ ನಿರೀಕ್ಷಿಸಬೇಡಿ. ಆದರೆ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವೇಳೆ ಮಹೇಂದ್ರ ಸಿಂಗ್ ಧೋನಿ ತನ್ನ ಆಪ್ತ ಸ್ನೇಹಿತ ಎಂದಿರುವ ಶಹಝಾದ್, ಧೋನಿ ಅವರ ಕೊಠಡಿಯ ಬಾಗಿಲು ಎಲ್ಲರಿಗೂ ತೆರದಿರುತ್ತದೆ ಎಂದಿದ್ದಾರೆ. ಸುರೇಶ್ ರೈನಾ ಹಾಗೂ ಶಿಖರ್ ಧವನ್ ಜೊತೆ ಸಮಯ ಕಳೆಯುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಧೋನಿಯ ಹೆಲಿಕಾಪ್ಟರ್ ಹೊಡೆತವನ್ನು ಅನುಕರಿಸಿ ಸುದ್ದಿಯಾಗಿದ್ದ ಬಿಗ್ ಹಿಟ್ಟರ್ ಶಹಝಾದ್, ಅಫ್ಘಾನಿಸ್ತಾನದ ಪರ ಟಿ-20 ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಜೊತೆಗೆ ಏಕದಿನ ಕ್ರಿಕೆಟ್‍ನಲ್ಲಿ ಮುಹಮ್ಮದ್ ನಬಿ ಬಳಿಕ ಅತಿಹೆಚ್ಚು ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್ ಅರ್ಹತಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದ ಶಹಝಾದ್, ದೇಹ ತೂಕ ಇಳಿಸಲು ಹೋಗಿ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ಒಂದು ವರ್ಷ ಅಮಾನತು ಶಿಕ್ಷೆಗೆ ಗುರಿಯಾಗಿ ಇತ್ತೀಚಿಗಷ್ಟೇ ತಂಡಕ್ಕೆ ಮರಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *