ಬಿರುಗಾಳಿ ಸಹಿತ ಮಳೆಗೆ ನಲುಗಿದ ಉತ್ತರಪ್ರದೇಶ, ರಾಜಸ್ಥಾನ : 68 ಮಂದಿ ಸಾವು

Public TV
1 Min Read

ನವದೆಹಲಿ: ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಬುಧವಾರ ಸಂಜೆಯಿಂದ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆ ಆಗುತ್ತಿದ್ದು, ಕನಿಷ್ಟ 68 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ವಾತಾವರಣದಲ್ಲಿ ಇದ್ದಕ್ಕಿದ ಹಾಗೆ ಉಂಟಾದ ಬದಲಾವಣೆ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆಗೆ ಕಾರಣ ಎನ್ನಲಾಗಿದ್ದು, ನೋಯ್ಡಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ.

ಬಿರುಗಾಳಿ ಮಳೆಯ ತೀವ್ರತೆಗೆ ಹಲವು ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ. ರಾಜಸ್ಥಾನದ ಪ್ರಮುಖ ಜಿಲ್ಲೆಗಳಾದ ಭರತಪುರ್, ಡೋಲ್‍ಪುರ್, ಅಲ್ವಾರ್ ನಲ್ಲಿ ಕ್ರಮವಾಗಿ 12, 10, 05 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ. ಇನ್ನು ಆಗ್ರಾದ ಶೈಕ್ಷಣಿಕ ಕಟ್ಟಡವೊಂದು ಉರುಳಿದ್ದ ಪರಿಣಾಮ 23 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಅಲ್ಲದೇ ಅಕಾಲಿಕ ಮಳೆಗೆ ರೈತರು ಬೆಳೆದ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಹಾನಿ ಸಂಭವಿಸಿದೆ.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ರಕ್ಷಣಾ ಕಾರ್ಯ ತೀವ್ರಗೊಳಿಸಲು ಆದೇಶ ನೀಡಿದ್ದಾರೆ. ಇನ್ನು ರಾಜಸ್ಥಾನದಲ್ಲಿ ಉಂಟಾದ 27 ಸಾವಿನ ಘಟನೆಗಳ ವರದಿಯ ಬಳಿಕ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯಿಸುವ ರಾಜಸ್ಥಾನ ಸಿಎಂ ವಸುಂಧರ ರಾಜೆ, ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಆದೇಶ ನೀಡಿರುವುದಾಗಿ ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಎರಡು ಸರ್ಕಾರಗಳು ಘಟನೆಯಲ್ಲಿ ಸಾವನ್ನಪ್ಪಿದವ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಿವೆ.

ರಾಜಸ್ಥಾನ ಮಾತ್ರವಲ್ಲದೇ ಉತ್ತರ ಭಾರತದ ಹಲವೆಡೆ ಅಕಾಲಿಕ ಮಳೆಯಾಗಿದೆ. ಬಿಹಾರ, ಪಂಜಾಬ್ ನಲ್ಲೂ ಬಿರುಗಾಳಿ ಸಹಿತ ಮಾಹಿತಿ ಮಳೆಯಾಗಿದೆ. ಅಕಾಲಿಕ ಮಳೆಯ ಕಾರಣ ತೀವ್ರ ಪ್ರಮಾಣದಲ್ಲಿದ್ದ ತಾಪಮಾನ ಇಳಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *