ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗುತ್ತಿದೆ. ದರೋಡೆ ನಡೆಸಲು ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕ ಹಾಗೂ ಆತನ ಮಗನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ರಾಮಸಾಗರದಲ್ಲಿ ಗ್ರಾಮದ ಹೊರಭಾಗದಲ್ಲಿರುವ ಡೈರಿ ನಾರಾಯಣರೆಡ್ಡಿ ಎಂಬವರ ಮನೆಗೆ ರಾತ್ರಿ ಕಳೆದ ರಾತ್ರಿ 8 ಗಂಟೆ ಸುಮಾರಿನಲ್ಲಿ ನುಗ್ಗಿದ ಐವರು ದರೋಡೆಕೋರರು ಮನೆ ಮಾಲೀಕ ಡೈರಿ ನಾರಾಯಣಸ್ವಾಮಿ ಹಾಗೂ ಮಗ ಚೇತನ್ ಇಬ್ಬರಿಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ.
ಇವರ ಚೀರಾಟ ಕಂಡ ಸ್ಥಳೀಯರು ಸ್ಥಳಕ್ಕಾಗಮಿಸಿ ದರೋಡೆಗೆ ಬಂದಿದ್ದ ಒಬ್ಬ ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾರೆ. ದರೋಡೆಕೋರರಿಂದ ಹಲ್ಲೆಗೊಳಗಾಗಿದ್ದ ತಂದೆ ಮಗ ಹಾಗೂ ದರೋಡೆಕೋರ ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕಳೆದ ವಾರವಷ್ಟೆ ಇಂತಹ ಕೃತ್ಯ ನಡೆದಿದ್ದು, ಇದೀಗ ಮತ್ತೆ ಇಂದು ಸಂಭವಿಸಿರುವ ಘಟನೆ ಆನೇಕಲ್ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.