ಶಾ ಸೂಚನೆ ಮೇರೆಗೆ ಕೈ ನಾಯಕರ ಫೋನ್ ಕದ್ದಾಲಿಕೆ: ರಾಮಲಿಂಗಾರೆಡ್ಡಿ ಆರೋಪ

Public TV
2 Min Read

ಬೆಂಗಳೂರು: ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆಯಾಗುತ್ತಿದೆ. ಅಮಿತ್ ಶಾ ಸೂಚನೆ ಮೇರೆಗೆ ಕದ್ದಾಲಿಕೆ ನಡೆಯುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಳೆದ 15 ದಿನದಿಂದ ಕದ್ದಾಲಿಕೆ ನಡೆಯುತ್ತಿದ್ದು ದೆಹಲಿ, ಗುಜರಾತ್, ಜೈಪುರ ತಂಡದಿಂದ ಫೋನ್ ಕದ್ದಾಲಿಕೆ ನಡೆಯುತ್ತಿದೆ. ನಮ್ಮ ಚುನಾವಣಾ ತಂತ್ರಗಳನ್ನು ಕದ್ದಿಯುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದನ್ನ ಹಿಂದಿ, ಇಂಗ್ಗೀಷ್ ನಲ್ಲಿ ಟ್ರಾನ್ಸ್ ಲೇಟ್ ಮಾಡಲಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆಯೂ ನಾನು ಇದನ್ನು ಹೇಳಿದ್ದೆ ಎಂದು ತಿಳಿಸಿದರು.

ಗುಪ್ತಚರ ಇಲಾಖೆಯಿಂದ ನಮಗೆ ಮಾಹಿತಿ ಸಿಕ್ಕಿದೆ ಸುಮಾರು 100ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಆಗುತ್ತಿದೆ. ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ತನಿಖೆ ನಡೆಸುವಂತೆ ಆಗ್ರಹ ಮಾಡಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗದುಕೊಳ್ಳುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರುಗಳನ್ನ ಟಾರ್ಗೆಟ್ ಮಾಡಿ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಹೊಂದಿರುವ ಉದ್ಯಮಿಗಳನ್ನ ಟಾರ್ಗೆಟ್ ಮಾಡಿ ಬಿಜೆಪಿ ಬೆಂಬಲಿಸಿಬೇಕು ಎಂದು ಪರೋಕ್ಷವಾಗಿ ಬೆದರಿಸಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನ ಬಳಸಿಕೊಂಡು ಕಿರುಕುಳ ಕೊಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ. ಕಳೆದ 15 ದಿನಗಳಿಂದ 16 ಗಂಟೆ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪ ಮಾಡಿದರು.

ಮಾಧ್ಯಮಗಳಲ್ಲಿ ಬಿಜೆಪಿ ಜಾಹೀರಾತು ಕುರಿತು ಮಾತನಾಡಿದ ಸಚಿವರು ನೂರಕ್ಕೆ ನೂರರಷ್ಟು ಹಸಿ ಸುಳ್ಳಿನ ಜಾಹೀರಾತು ನೀಡಲಾಗುತ್ತಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೇ ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋದ ವಿಚಾರ, ಬಿಜೆಪಿ ಸರ್ಕಾರದಲ್ಲಿನ ಮೂವರು ಸಿಎಂ ಆದ ಕುರಿತು, ಸದನದ ಒಳಗೆ ಬ್ಲೂ ಫಿಲ್ಮ್ ನೋಡಿದ್ದು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕಲಾಗುವುದು ಎಂದಿದ್ದ ಮೋದಿ ಭರವಸೆ, ಬೆಂಗಳೂರು ಗಾರ್ಬೆಜ್ ಸಿಟಿ ಮಾಡಿದ್ದರ ಬಗ್ಗೆ ಜಾಹೀರಾತು ನೀಡಲಿ ಎಂದು ವ್ಯಂಗ್ಯವಾಡಿದರು.

ಕ್ರೈಂ ರೇಟ್ ಬಿಜೆಪಿ ಅವಧಿಗಿಂತಲೂ ನಮ್ಮ ಅವಧಿಯಲ್ಲಿ ಕಡಿಮೆಯಾಗಿದೆ. ಮಾಧ್ಯಮಗಳನ್ನ ಬಿಜೆಪಿ ದುರಪಯೋಗಪಡಿಸಿಕೊಳ್ಳುತ್ತಿದೆ. ಸುಳ್ಳು ಜಾಹೀರಾತು ಬಗ್ಗೆ ಬಿಜೆಪಿ ಮೇಲೆ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *