ತಿರುವನಂತಪುರ: ತನ್ನ ಪ್ರಿಯತಮನ ಜೊತೆ ಹೊಸ ಜೀವನ ನಡೆಸಲು ಅಡ್ಡಿಯಾಗುತ್ತಿದ್ದಾರೆಂದು ತಂದೆ-ತಾಯಿ ಹಾಗೂ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು 34 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಬಂಧಿಸಿದ ಬಳಿಕ ಬರೋಬ್ಬರಿ 11 ಗಂಟೆ ವಿಚಾರಣೆ ನಡೆಸಿದಾಗ ನಾಲ್ವರ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಹೆತ್ತವರು, ಮಗಳ ಕೊಲೆ: ಜನವರಿ 31ರಂದು ಸೌಮ್ಯ ಮಗಳು 8 ವರ್ಷದ ಐಶ್ವರ್ಯಾ ಸಾವನ್ನಪ್ಪಿದ್ದಳು. ಈ ಮೊದಲು ಮಾರ್ಚ್ 7ರಂದು ಆಕೆಯ ತಾಯಿ 68 ವರ್ಷದ ತಾಯಿ ಕಮಲ ಹಾಗೂ ಏಪ್ರಿಲ್ 13ರಂದು ತಂದೆ 76 ವರ್ಷದ ಕುನ್ಹಿಕನ್ನಣ್ ಮೃತಪಟ್ಟಿದ್ದರು. ಇನ್ನೊರ್ವ ಮಗಳು ಕೀರ್ತನಾ 2012ರಲ್ಲಿ ಮೃತಪಟ್ಟಿದ್ದಳು. ಈ ನಾಲ್ವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸದ ಪಕ್ಕದ ನಿವಾಸದಲ್ಲಿದ್ದು, ಇವೆರೆಲ್ಲರೂ ವಾಂತಿ ಬಾಧೆಯಿಂದ ಮೃತಪಟ್ಟಿದ್ದಾರೆಂದು ವರದಿಯಾಗಿತ್ತು.
ಇತ್ತ ಒಬ್ಬರಾದ ಮೇಲೊಬ್ಬರಂತೆ ಕುಟುಂಬದವರೆಲ್ಲ ಸಾವನ್ನಪ್ಪಿದ್ದರಿಂದ ಸಂಶಯಗೊಂಡ ಕುಟುಂಬಸ್ಥರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನ್ನ ನಿವಾಸದ ಬಳಿಯೇ ನಿಗೂಢವಾಗಿ ವ್ಯಕ್ತಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಪೊಲೀಸರಿಗೆ ತನಿಖೆ ನಡೆಸಿ ಕೊಲೆ ರಹಸ್ಯವನ್ನು ಬೇಧಿಸುವಂತೆ ಸೂಚಿಸಿದ್ದರು. ತನಿಖೆಗೆ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಮೃತದೇಹಗಳನ್ನು ಸಮಾಧಿಯಿಂದ ಮೇಲಕ್ಕೆ ಎತ್ತಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದವರು ಮೃತದೇಹವನ್ನು ಪರಿಶೀಲಿಸಿದಾಗ ಐಶ್ವರ್ಯಾ ದೇಹದಲ್ಲಿ ಅಲ್ಯೂಮಿನಿಯಂ ಫಾಸ್ಫೈಡ್ ಇರುವ ಅಂಶ ಪತ್ತೆಯಾಗಿತ್ತು. ಸಾಧಾರಣವಾಗಿ ಕೀಟನಾಶಕದಲ್ಲಿ ಬಳಸುವ ಈ ರಾಸಾಯನಿಕ ದೇಹದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಇದೊಂದು ಕೊಲೆ ಎನ್ನುವುದು ಪೊಲೀಸರಿಗೆ ಗೊತ್ತಾಯಿತು.
ಈ ನಡುವೆ ತನ್ನ ಮೇಲೆ ಯಾರೂ ಸಂಶಯ ವ್ಯಕ್ತಪಡಿಸಬಾರದೆಂದು ಸೌಮ್ಯ ಮಕ್ಕಳು ಹಾಗೂ ಪೋಷಕರಿಗೆ ಕಂಡು ಬಂದಿದ್ದ ಸಮಸ್ಯೆ ನನ್ನಲ್ಲೂ ಕಂಡುಬರುತ್ತದೆ ಎಂದು ಹೇಳಿ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಚಿಕಿತ್ಸೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಿಜವಾದ ಸಂಗತಿ ಪ್ರಕಟವಾಗಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಸೌಮ್ಯಾಳನ್ನು 4 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕೊಲೆ ಮಾಡಿದ್ದು ಯಾಕೆ?
ಮದುವೆಯಾಗಿ ಈಗಾಗಲೇ ಮಕ್ಕಳನ್ನು ಹೊಂದಿರುವ ಸೌಮ್ಯಳಿಗೆ ಅಕ್ರಮ ಸಂಬಂಧವಿತ್ತು. ಅಷ್ಟೇ ಅಲ್ಲದೇ ಗಂಡ ಜೊತೆ ಡೈವೋರ್ಸ್ ಪಡೆದಿದ್ದಳು. ಒಂದು ದಿನ ತಾಯಿ ಸೌಮ್ಯ ಪ್ರಿಯಕರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾಗ ಸಣ್ಣ ಮಗಳು ಕೀರ್ತನಾ ನೋಡಿದ್ದಾಳೆ. ಈ ವಿಚಾರ ಗೊತ್ತಾದ ಕೂಡಲೇ ಸಿಟ್ಟುಗೊಂಡ ಸೌಮ್ಯ ಮಗಳನ್ನು ಇಲಿಪಾಷಾಣ ಹಾಕಿ 2012 ರಲ್ಲಿ ಕೊಲೆ ಮಾಡಿದ್ದಳು. ನಂತರ ತನ್ನ ಅಕ್ರಮ ಸಂಬಂಧಕ್ಕೆ ಮುಂದುವರಿಸಲು ಮನೆಯವರು ಅಡ್ಡಿ ಆಗುತ್ತಿದ್ದಾರೆ ಎಂದು ತಿಳಿದು ಹಂತ ಹಂತವಾಗಿ ಒಬ್ಬೊಬ್ಬರನ್ನು ಮುಗಿಸಲು ಪ್ಲಾನ್ ಮಾಡುತ್ತಾ ಬಂದಿದ್ದಾಳೆ. ಅದರಂತೆ ಎಲ್ಲರಿಗೂ ಆಹಾರದಲ್ಲಿ ಇಲಿ ಪಾಷಾಣ ಹಾಕಿ ಕೊಲೆ ಮಾಡಿದ್ದಾಳೆ. ನಿಗೂಢವಾಗಿ ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾಗ ಆಕೆ ನನ್ನ ಮಗಳು ಹಿಂದೆ ವಾಂತಿ ಮಾಡಿ ಮೃತಪಟ್ಟಿದ್ದಳು. ಇದಾದ ನಂತರ ಪೋಷಕರು ಈ ರೀತಿಯಾಗಿ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಇವರೆಲ್ಲ ಮೃತಪಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಜನರಲ್ಲಿ ಹೇಳಿ ತಾನು ಈ ಪ್ರಕರಣದಲ್ಲಿ ಅಮಾಯಕಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಳು.